ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೦

ಮನಮಂಥನ

ಹೆಂಡತಿಯು ಬಳಿಯಲ್ಲಿರದಿದ್ದರೂ, ನಾಡಿಯು ಕುಂಟೆಬಿಲ್ಲೆ ಆಡಿದರೂ, ಪರವಾಗಿಲ್ಲ. ಯಾವ ಕೇಡೂ ಆಗುವುದಿಲ್ಲ ಎನ್ನುವ ವಿಶ್ವಾಸವು ಮೂಡತೊಡಗಿತು. ಕ್ರಮೇಣ ಆತಂಕವೂ ಕಡಮೆಯಾಗಹತ್ತಿತು. ಆಗ ವಿಚಾರವನ್ನು ಮಾಡಲು ಸಮರ್ಥನೂ ಆದ, ವಾಸ್ತವಿಕವಾದ ತನ್ನ ಸ್ಥಿತಿಗಳನ್ನು ಅರಿತುಕೊಂಡ. ದಿಳ್ಳಿಯ ಆಸೆಗಳೆಲ್ಲ ಮಾಯಾ ಮೃಗಗಳು ಎಂಬುದನ್ನೂ ಸ್ಪಷ್ಟವಾಗಿ ಕಂಡ. ಈಗೀಗ ಬ್ಲಡ್ ಪ್ರೆಷರ್' ಎಷ್ಟಿದೆ ಎಂದು ನೋಡಿಸುವುದಕ್ಕೂ ಹೋಗುತ್ತಿಲ್ಲ. ನಾಡಿಯ ಮೇಲೆ ಬೆರಳನ್ನು ಇರಿಸಿರುವುದೂ ಇಲ್ಲ.

ಇಷ್ಟರ ಮಟ್ಟಿಗೆ ಗುಣವಾಗುವುದಕ್ಕೆ ಸುಮಾರು ಒಂದು ವರ್ಷ ಹಿಡಿಯಿತು. ಈ ಅಂತರದಲ್ಲಿ ಆತಂಕಶಮನ ಮಾಡುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕೊಡಲಾಯಿತು. ಮೇಲಿಂದ ಮೇಲೆ ಒತ್ತಿಒತ್ತಿ ಹೇಳಿ, ಅವನ ಮನಸ್ಸನ್ನು ಹುರಿದುಂಬಿಸಲಾಯಿತು. ಹಾಗೂ ಕಾಲವೂ ಹಳೆಯದನ್ನು ಮರೆಸುತ್ತಾ, ಕಾಲ ಕ್ರಮೇಣ ಗುಣವನ್ನು ಸಾಧಿಸಿತು.

Da'Costa's Syndrome, ಎಂದು ಕರೆಯಲ್ಪಡುವ ಈ ಬೇನೆಯು ಮನಸ್ಸಿನ ತೀವ್ರ ಆತಂಕದಿಂದ ಹುಟ್ಟಿಕೊಳ್ಳುತ್ತದೆ. 'ಹೃದಯವೇ ನಿಂತು ಹೋಯಿತು; ಜ್ಞಾನವು ತಪ್ಪುತ್ತದೆ.' ಇತ್ಯಾದಿ ತೀವ್ರ ಭಯದಿಂದ, ಕೈಕಾಲು ಕುಸಿದು, ಮುಖವೆಲ್ಲಾ ಬಿಳುಪೇರಿ, ಬಿದ್ದೇಬಿಡುತ್ತಾರೆ, ಕೆಲವರು.

ಯುದ್ಧಗಳಲ್ಲಿ ಇಂತಹ ಬೇನೆಯು, ಹಲವಾರು ಯುವಕ ಸೈನಿಕರಿಗೆ ಬಡಿಯುತ್ತದೆ. ನಾಳೆ ಬದುಕಿರುತ್ತೀವಿ ಎನ್ನುವ ವಿಶ್ವಾಸವಿರುವುದಿಲ್ಲ. ಯಾವ ಕ್ಷಣದಲ್ಲಿ ಎಲ್ಲಿಂದಲೋ ಬಂದ ಗುಂಡು ಕೊಂದುಬಿಡಬಹುದು ಎನ್ನುವ ಅನಿಶ್ಚಿತೆಯು ತೀವ್ರ ಆತಂಕವನ್ನು ಉಂಟುಮಾಡುತ್ತದೆ. ಆಗ ಹೃದಯದ ಕಾರ್ಯವೂ ವ್ಯತ್ಯಾಸವಾಗುತ್ತದೆ. ಸೈನ್ಯದ ಡಾಕ್ಟರುಗಳು ಇಂತಹವರನ್ನು ಪರೀಕ್ಷಿಸಿದಾಗ, ಸೈನ್ಯಕ್ಕೆ ಇನ್ನು ಮುಂದೆ ಇವ ನಾಲಾಯಕ್ಕು, ಎಂದು ಮನೆಗೆ ಹಿಂದಿರುಗಿಸುತ್ತಾರೆ. ಹಾಗಾಗಿ ಯುದ್ಧ ಭೂಮಿಯಿಂದ ವಿನಾಯಿತಿಯನ್ನೂ ಪಡೆಯುತ್ತಾನೆ. ಇಷ್ಟವಿಲ್ಲದೆ, ಕೇವಲ ಒತ್ತಾಯಕ್ಕಾಗಿ, ಹಾಗೂ ಹಣದ ಆಸೆಯಿಂದ, ಸೈನಿಕರಾದವರಿಗೆ, ಸೈನ್ಯದಿಂದ ಮರ್ಯಾದೆಯನ್ನು ಉಳಿಸಿಕೊಂಡು ವಾಪಸಾಗಲು Da' Costa's Syndrome ಉಪಯುಕ್ತವಾಗುತ್ತದೆ. ಆತಂಕವು ಅತಿಯಾದಾಗ, ಆತಂಕದ ಮೂಲ ಕಾರಣಗಳನ್ನು ನಿವಾರಿಸಿಕೊಳ್ಳಲು ದೇಹದ ಮೂಲಭೂತ ಜಾಣತನವು ಬಳಸುವ ಉಪಾಯ, ಈ ಬೇನೆ.

ಅತಿ ಪ್ರೀತಿಯಿಂದ ಸಾಕಿದ ತಂದೆಯೋ, ತಾಯಿಯೋ, ಪೂರ್ಣಾಯಸ್ಸಿನಲ್ಲಿ