೪೩
ಗೂಡೂಮಿಯ್ಯ ಇರಲಿಲ್ಲವೇ? ಮೂರು ಬಾರಿ ದಸರಾ ಕುಸ್ತಿಗಳಲ್ಲಿ ಚಿನ್ನದ ಥೋಡಾ ಹಾಕಿಸಿಕೊಂಡಿದ್ದನಲ್ಲ, ಅವ. ಅವನ ಒಬ್ಬನೇ ಮಗ ಲತೀಫ್, ಆಖಾಡಾದ ಲಾಲ್ಮಟ್ಟಿಯಲ್ಲಿ ಲತೀಫ್ ಕೂಡ ಪ್ರಾಯದಲ್ಲಿ ಕುಸ್ತಿ ಆಡುತ್ತಿದ್ದ. ಒಬ್ಬನೇ ಮಗನ ಮೇಲೆ ಗೂಡೂಮಿಯ್ಯಾಗೆ ಅಸಾಧ್ಯ ಪ್ರೇಮ. ಕುಸ್ತಿಯ ಪಟ್ಟುಗಳನ್ನೆಲ್ಲಾ ಮಗನಿಗೆ ತಾನೇ ಕಲಿಸುತ್ತಿದ್ದ. 'ಬೇಟಾ! ಲಡಕ್ ಹಾಕಿ ಥೋಡಾ ಗಿಟ್ಟಿಸಿದರೆ ಸಾಲದು. ಓದಿ ವಿದ್ಯಾವಂತನಾಗಿ ಹುಜೂರ್ ಸರ್ಕಾರದಲ್ಲಿ ಬಡಾ ಚಾಕರಿ ಮಾಡಬೇಕು' ಎಂದು, ಶಾಲೆಗೆ ಮಗನನ್ನು ಕರೆದುಕೊಂಡು ಹೋಗುವಾಗಲೆಲ್ಲ ಹೇಳುತ್ತಿದ್ದ. ಮಧ್ಯಾಹ್ನದ ಊಟವನ್ನು ತಾನೇ ಶಾಲೆಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದ. ಸಂಜೆ ಶಾಲೆಯಿಂದ ಮಗನನ್ನು ಅವನೇ ಕರೆತರುತ್ತಿದ್ದ. ಬಾಲ್ಯದ ನಾಲ್ಕನೆಯ ವರ್ಷದಿಂದಲೂ, ಲತೀಫ್ ಬೇಟಾ ಗೂಡೂಮಿಯ್ಯಾನ ಚಿಕ್ಕನೆರಳಾಗಿದ್ದ, ಅಲೀಫ್, ಬೇ, ತೇ, ಶುರು ಮಾಡಿದ ಲತೀಫ್, ಓದಿನಲ್ಲಿ ಸಾಧಿಸಿದ ಪ್ರಗತಿಯನ್ನು ಅಖಾಡಾದಲ್ಲಿ ಪಡೆಯಲಿಲ್ಲ.
ಬಿ.ಎ. ಪರೀಕ್ಷೆಯಲ್ಲಿ ಸೆಕೆಂಡ್ ಕ್ಲಾಸ್ ಅನ್ನು ಲತೀಫ್ ಗಿಟ್ಟಿಸಿದ. ಗೂಡೂಮಿಯ್ಯಾನ ಸಂತೋಷವನ್ನು ಹೇಳತೀರದು. ಭಾರೀತುರಾಯಿ, ಅದಕ್ಕಿಂತ ಭಾರೀ ಹಾರವನ್ನು, ಮಗನಿಗೆ ಹಾಕಿ, ಅಪ್ಪಿಕೊಂಡ. ಅದಾದ ಒಂದು ತಿಂಗಳಿನಲ್ಲಿ ನಡೆದ ಭಾರೀ ಕುಸ್ತಿ ಪಂದ್ಯದಲ್ಲಿ ರಾಣಿಬೆನ್ನೂರಿನ ಸಣಕಲ್ ಸಿದ್ದಯ್ಯನಿಗೆ, ಲತೀಫ್ ಸೋತಿದ್ದ. ತುಂಬಾ ಅವಮಾನವಾದಂತೆ ಲತೀಫ್ ಕೊರಗುತ್ತಿದ್ದ. 'ಜಾಂದೇ ಛೋಡೋ, ಬೇಟಾ ! ಬಿ. ಎ. ಪಡಕೋ, ಆಖಾಡಾಮೇ ಗಿರೇತೋ ಕ್ಯಾ?' ಎಂದು ಲತೀಫ್‌ನನ್ನು ಗೂಡೂಮಿಯ್ಯ ಉತ್ತೇಜಿಸಿದ್ದ. ಅವನೊಬ್ಬನೆ ಲತೀಫನಿಗೆ ದೃಢವಾದ ಬೆಂಬೊತ್ತು.
ಆ ಮೇಲೆಯೂ ಯಾವುದೊಂದು ಕೆಲಸವನ್ನು ಮಾಡಬೇಕಾದರೂ, ಅಪ್ಪನ ಸಮ್ಮತ ಮತ್ತು ಸಲಹೆಯನ್ನು ಲತೀಫ್ ಪಡೆಯುತ್ತಲೇ ಇದ್ದ. ಇದು ಕಟ್ಟುನಿಟ್ಟು ಅಭ್ಯಾಸವಾಗಿತ್ತು. ಉಡುಪುಗಳನ್ನು ಹೊಲಿಸುವಾಗಲೂ ಗೂಡೂಮಿಯ್ಯ ಹೇಳಿದುದನ್ನೇ ಲತೀಫ್ ಒಪ್ಪುತ್ತಿದ್ದ. ಆಖಾಡಾದ ಅಭಿರುಚಿಗೆ ತಕ್ಕಂತೆ ಗೂಡೂಮಿಯ್ಯಾ ಬಟ್ಟೆಯನ್ನು ಚುನಾಯಿಸಿದರೂ, ಹೂ ಅನ್ನುತ್ತಿದ್ದ ಲತೀಫ್. ತಾನೊಪ್ಪದೇ ಇರಲಿ ಎಷ್ಟೇ ಬೇಸರವನ್ನು ತರಲಿ, ಅಪ್ಪನ ಮನಸ್ಸನ್ನು ನೋಯಿಸಬಾರದು ಎಂದೇ ಲತೀಫನ ಗುರಿ. ಬಟ್ಟೆ ಬರೆ ; ಊಟ ತಿಂಡಿ ; ಸಿನಿಮಾ ಷೋಕಿ; ನಿಕ್ಕಾ ತಲಕ್ ; ಎಲ್ಲದರಲ್ಲಿಯೂ ಲತೀಫ್, ಅಪ್ಪನ ಸಲಹೆಯನ್ನು ಮೀರುತ್ತಿರಲಿಲ್ಲ. ಅಪ್ಪ ಎಂದರೆ ಅಷ್ಟು ಗೌರವ ; ಅಷ್ಟು ಆದರ.