ಮನಮಂಥನ
ತನ್ನ ಕಾಲ ಮೇಲೆ ತಾನು ನಿಂತು, ಬಾಳನ್ನು ನಡೆಸುವುದು ಶ್ರೇಯಸ್ಕರ ಎನ್ನುವುದು ಲತೀಫನಿಗೆ ತೋಚಲೇ ಇಲ್ಲ. ಅಪ್ಪ ಹಾಕಿದ ಆಲದ ಮರಕ್ಕೆ ನೇಣುಬಿದ್ದಿದ್ದ.
ಎಲ್ಲಾ ಬಡಾ ಬಡಾ ಉಸ್ತಾದರಂತೆ, ಗೂಡೂಮಿಯ್ಯ ಕೂಡ ಐವತ್ತರ ಪ್ರಾಯದಲ್ಲಿ ಹೃದಯದ ಬಳಲಿಕೆಗೆ ಬಲಿಯಾದ. ಒಂದೆರಡು ವರ್ಷಗಳು ಅಪ್ಪನ ಸೇವೆಯನ್ನು, ಮುತುವರ್ಜಿಯಿಂದ ಮತ್ತು ಆದರದಿಂದ, ಲತೀಫ್ ಮನಸ್ಸಾಕ್ಷಿಯಾಗಿ ಮಾಡಿದ. ವಸಿಷ್ಠನಿಗೆ ರೋಗ ಬಂದಿದ್ದರೆ, ಅರುಂಧತಿಯು ಕೂಡ ಅಷ್ಟು ಶ್ರದ್ಧೆಯಿಂದ ಸೇವೆ ಮಾಡುತ್ತಿರಲಿಲ್ಲವೇನೋ ? ಖುದಾಕಾ ಫಜಲ್ ಒಂದು ಸಂಜೆ ಮುಗಿಯಿತು ನೆಟ್ಟ ಕಣ್ಣು ಬಿರಿಬಿರಿ ಬಿಟ್ಟು, ದೊಡ್ಡ ಉಸಿರನ್ನು ಒಮ್ಮೆ ಘರಘರ ಎಳೆದುಕೊಂಡು, ಗೂಡೂಮಿಯ್ಯ ಅಲ್ಲಾನ ಬಳಿಗೆ ಹೋಗಿಬಿಟ್ಟ. ಇದೆಲ್ಲವನ್ನೂ ಕಣ್ಣಾರೆ ಕಂಡ ಲತೀಫನಿಗೆ ಬಾಳಿನ ತಳಪಾಯವೇ ಸಡಿಲಗೊಂಡು ಬಿದ್ದು ಹೋದಂತಾಯಿತು.
ಓದಿದ ವಿದ್ಯಾವಂತ ತರುಣ, ಲತೀಫ್. ಉಣ್ಣುಕ್ಕೆ ತಿನ್ನುಕ್ಕೆ ಬೇಕಾದಷ್ಟನ್ನು ಅಪ್ಪ ಬಿಟ್ಟು ಹೋಗಿದ್ದ. ಉಡುಕ್ಕೆ ಮಡಗುವುದಕ್ಕೆ ಸಾಕಷ್ಟು ಸಂಬಳ ದೊರೆಯುತ್ತಿತ್ತು.ಅಂದಮೇಲೆ ಬಾಳಿ ಬದುಕಲು ಆರ್ಥಿಕ ತೊಂದರೆಗಳೊಂದೂ ಇರಲಿಲ್ಲ.ಎಲ್ಲರೂ ಒಂದು ದಿನ ಅಲ್ಲ ಇನ್ನೊಂದು ದಿನ ಸಾಯಲೇಬೇಕು ; ಅದಕ್ಕಾಗಿ ಅತಿಯಾಗಿ ಕೊರಗುವುದು ಪೆಚ್ಚುತನ ಎಂದು ಲತೀಫನ ವಿಚಾರಪರ ಮನಸ್ಸು ನುಡಿಯುತ್ತಿತ್ತು. ಅಂತಹ ತಂದೆಯು ತೀರಿಕೊಂಡನಲ್ಲಾ ಎನ್ನುವ ಕೊರಗು ಭಾವನಾ ಮನಸ್ಸಿನಲ್ಲಿ ಕುಕ್ಕುತ್ತಿತ್ತು. ಜತೆ ಜತೆಯಾಗಿಯೇ 'ಇನ್ನುಮುಂದೆ ನನಗೆ ಸೂಕ್ತ ಸಲಹೆಯನ್ನು ಕೊಡುವವರಾರು ? ಈಗ ನಾನು ತಬ್ಬಲಿ. ಒಬ್ಬನೇ ಆದೆ. ಒಬ್ಬಂಟಿ ನಾನು' ಎನ್ನುವ ಯೋಚನೆಯೂ ಕಾಡಹತ್ತಿತು.
ಅಪ್ಪನ ನೆರಳಾಗಿ ಬೆಳೆದ ಲತೀಫನ ಮನಸ್ಸು, ವಯಸ್ಸಿಗೆ ತಕ್ಕಂತೆ ಬೆಳೆದು ಅಣಿಗೊಂಡಿರಲಿಲ್ಲ. ಆದಕಾರಣ, ಒಬ್ಬಂಟಿ ನಾನು, ತಬ್ಬಲಿ' ಎನ್ನುವ ಯೋಚನೆಯು ಬಂದಾಗ, ಆ ಯೋಚನೆಯು ಹೊರವಾಗಿ ಬೆಳೆಯುವಂತಾಯಿತು. ಇನ್ನು ಮುಂದೆ ಹೇಗಪ್ಪಾ, ಎನ್ನುವ ಆತಂಕವೂ ಕಾಡಲಾರಂಭಿಸಿತು. ಗೂಡೂಮಿಯ್ಯಾನ ಕೊನೆಯ ದಿನಗಳ ನರಳುವಿಕೆ ಮತ್ತು ಅಂತ್ಯವು, ಲತೀಫನ ಕಣ್ಣಿಗೆ ಕಟ್ಟಿದಂತಾಗಿತ್ತು. ಅವನ ಮನಸ್ಸಿನಲ್ಲಿ ಅಷ್ಟೊತ್ತಿದ ಚಿತ್ರವಾಗಿತ್ತು.
ಮನಸ್ಸಿನ ಆತಂಕವು ಮಿತಿಮೀರಿದಾಗ, ಅಪ್ಪನ ಸಾವಿನ ಚಿತ್ರವೂ ಭೂತ ಕನ್ನಡಿಯಲ್ಲಿ ಕಂಡಂತಾಯಿತು, ಭಯವಾಯಿತು. ಈ ಭಯವು ಏಕೆ ಎನ್ನುವುದು