೪೭
'ಅಂತಹ ಘೋರವೇನೂ ಇಲ್ಲ, ಡಾಕ್ಟರೇ ! ಹಸಿವಾಗುತ್ತೆ, ಚೆನ್ನಾಗಿ ತಿಂತೀನಿ; ಜೀರ್ಣ ಆಗುತ್ತೆ. ಝಕಾಯಿಸಿಕೊಂಡು ಬರುತ್ತೆ, ನಿದ್ರೆ, ಆದರೆ ಕಣ್ಣು ಮುಚ್ಚಿದ ಸ್ವಲ್ಪ ಹೊತ್ತಿನಲ್ಲಿ ಎದೆಗೂಡಿನ ಮಧ್ಯದ ಮೂಲೆಯಲ್ಲಿ ಏನೋ ತಿವಿದಂತಾಗುತ್ತದೆ. ಆಗ ಎದೆಗೂಡು ತುಡಿದಂತಾಗುತ್ತದೆ. ಎಲ್ಲಾ ಒಂದರಕ್ಷಣ. ಅಷ್ಟೇ ! ಎಚ್ಚರವಾಗಿ ಬಿಡುತ್ತೆ. ನಂತರ ಏನೂ ಇರುವುದಿಲ್ಲ. ಆದರೆ ತುಂಬಾ ಗಾಬರಿಯಾಗುತ್ತದೆ. ಸಿಕ್ಕಾಪಟ್ಟೆ ಭಯವಾಗುತ್ತದೆ. ಸಾವಿನ ಭಯವಲ್ಲ ; ನೋವಿನ ಭಯವಲ್ಲ ; ಹೇಳಲಸಾಧ್ಯವಾದ ಎಂತದೋ ಕರಾಳಭಯ. ಆಮೇಲೆ ಎಷ್ಟು ಪ್ರಯಾಸಪಟ್ಟರೂ ಕಣ್ಣುರೆಪ್ಪೆ ಮುಚ್ಚುವುದಕ್ಕಾಗುವುದಿಲ್ಲ' ಎಂದು, ಕಾತರ ತುಂಬಿದ ಧ್ವನಿಯಲ್ಲಿ ಹೇಳಿದ.
'ಎದೆ ಗೂಡು ತುಡಿಯುತ್ತದೆ ಅಂದರೆ ಏನಪ್ಪಾ ? ಈ ತನಕ ಈ ಮಾತನ್ನು ಕೇಳಿಯೇ ಇಲ್ಲ. ಹಾಗಂದರೇನು ? ವಿವರವಾಗಿ ತಿಳಿಸು' ಎಂದೆ.
'ಹೇಗೆ ಅಂತ ವಿವರಿಸಲಿ ; ನೋವಲ್ಲ. ಅದು, ನವೆಯೂ ಅಲ್ಲ. ಆಗಬಾರದ್ದು ಏನೋ ಆಗ್ತಾ ಇದೆ ಎಂಬ ಹೆದರಿಕೆಯಾಗುತ್ತೆ. ಬ್ಲಡ್ ಪ್ರೆಷರ್ ಹೆಚ್ಚಾದರೆ ಹೀಗೇನಾದರೂ ಆಗುತ್ತೆ' ಎಂದು ಕೇಳಿದ.
ಕಾತರದ ಗೆರೆಗಳು ಅವನ ಮುಖದ ಮೇಲೆ ರಂಗೋಲಿ ಹಾಕಿದ್ದುವು. ತುಂಬಾ ನರಳುತಿದ್ದಾನೆ. ಅಸ್ಪಷ್ಟವಾದ ಅನುಭವಗಳನ್ನು ಮಾತುಗಳಲ್ಲಿ ವಿವರಿಸಲು ಅಶಕ್ತನಾಗಿದ್ದಾನೆ. ಆದುದರಿಂದ ಎದೆ ತುಡಿಯುತ್ತದೆ ಎಂದು ಹೇಳಿದ್ದಾನೆ, ಎಂದಂದುಕೊಂಡೆ. ಆದರೆ ಬ್ಲಡ್ ಪ್ರೆಷರಿನ ಮಾತನ್ನು ಏತಕ್ಕೆ ಎತ್ತಿದ ? 'ಬ್ಲಡ್ ಪ್ರೆಷರ್ ಹೆಚ್ಚಾಗಿರಬಹುದು ಎಂದು ಯಾಕೆ ಅನುಮಾನ ಬಂತು' ? ಎಂದೆ.
'ಅಂತಹ ಅನುಮಾನವೇನೂ ಇಲ್ಲ. ನನ್ನ ವಯಸ್ಸಿನ ಸ್ನೇಹಿತನೊಬ್ಬ ಆರೋಗ್ಯವಾಗಿಯೇ ಇದ್ದ. ವಿಮೆ ಮಾಡಿಸಿದ. ವೈದ್ಯ ಪರೀಕ್ಷೆಯಾದಾಗ, ಬ್ಲಡ್‌ಪ್ರೆಷರ್ ಹೆಚ್ಚಾಗಿದೆ. ವಿಮೆ ಇಳಿಸುಲ್ಲ ಅಂದರು. ನನಗೂ ಹಾಗೇನಾದರೂ ಆಗಿರಬಹುದೇ ಅಂತ ಅನುಮಾನ ಬಂತು' ಎಂದ.
ಬ್ಲಡ್ ಪ್ರೆಷರ್' ಎಂದರೇನು ? ದೇಹದ ಮೂಲೆ ಮೂಲೆಗಳಿಗೂ ಸಾಕಷ್ಟು ರಕ್ತವನ್ನು ಸರಬರಾಜು ಮಾಡಬೇಕಾದರೆ, ಹೃದಯವು ಸಾಮಾನ್ಯವಾಗಿ ೧೨೦ರ ಪ್ರಮಾಣದ ಪ್ರಷರನ್ನು ಉತ್ಪಾದಿಸುತ್ತದೆ. ಕೋಪ, ಕಾತರ ಇತ್ಯಾದಿ ಕಾರಣಗಳಿಂದ ೧೪೦–೧೫೦ರಷ್ಟು ಇರಬಹುದು. ಆದಾಕ್ಷಣ ಅದು ಬ್ಲಡ್‌ಪ್ರೆಷರ್ ಬೇನೆ ಎನಿಸಿಕೊಳ್ಳುವುದಿಲ್ಲ. ರಕ್ತದ ಸರಬರಾಜು ದೇಹದಲ್ಲೆಲ್ಲಾ ಅಣಿಯಾಗಿ ಆಗುವುದಕ್ಕೆ ಎಷ್ಟು ಪ್ರೆಷರಿನ ಅಗತ್ಯವಿದೆಯೋ, ಅಷ್ಟನ್ನು ದೇಹದ ಸಹಜ