ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೮

ಮನಮಂಥನ

ಜಾಣತನವು ಉತ್ಪಾದಿಸುತ್ತದೆ. ಅನಗತ್ಯವಾದ ಪ್ರೆಷರನ್ನು ಉತ್ಪಾದಿಸುವುದೇ ಇಲ್ಲ. ವ್ಯಕ್ತಿಯ ತೋರ ಮನಸ್ಸು ಬ್ಲಡ್‌ಪ್ರೆಷರಿನ ಹತೋಟಿಯಲ್ಲಿ ನೇರ ಪಾತ್ರವನ್ನು ವಹಿಸುವುದೇ ಇಲ್ಲ. ಆದರೆ ಬ್ಲಡ್ ಪ್ರೆಷರ್ ಏರಿದೆ, ಅಥವಾ ಏರುತ್ತದೆ ಎಂದು ಸದಾ ಚಿಂತಿಸಿ ಕೊರಗಲಾರಂಭಿಸಿದರೆ, ಮುಂದೆ, ಕೆಲವು ವರ್ಷಗಳಲ್ಲಿ ದಿಟವಾದ ಬ್ಲಡ್ ಪ್ರೆಷರ್ ಕಾಯಿಲೆಯೇ ಬರಬಹುದು ಎಂದು ಬ್ಲಡ್‌ಪ್ರೆಷರಿನ ವಿವರಗಳನ್ನು ಚಿತ್ರಗಳ ಮೂಲಕ ತಿಳಿಸಿದೆ. 'ನಿನಗೆ ಆ ಬೇನೆಯ ಭಯವೇ ಇಲ್ಲ. ನೆಮ್ಮದಿಯಾಗಿರು, ನಿದ್ರೆ ಬರುವಂತೆ, ಆತಂಕವು ಸ್ವಲ್ಪ ಶಮನವಾಗುವಂತೆ ಔಷಧಿಯನ್ನು ಕೊಡುತ್ತೇನೆ ನಿಶ್ಚಿಂತನಾಗಿರು' ಎಂದು ಹೇಳಿ ಕಳುಹಿಸಿಕೊಟ್ಟೆ

ಆದರೆ ಮೂರನೆಯ ವಾರ, ಮೂರು ಸರ್ತಿ ಎದೆ ತುಡಿಯಿತು, ಎಂದು ಗಾಬರಿ ಪಟ್ಟುಕೊಂಡು ದವಾಖಾನೆಗೆ ಓಡಿ ಬಂದ. ಬ್ಲಡ್‌ ಪ್ರೆಷರಿನ ಆತಂಕವೊಂದೇ ಇದಕ್ಕೆ ಕಾರಣವಲ್ಲ. ಮಹತ್ತರವಾದ ಇನ್ನು ಯಾವುದೋ ಕಾರಣವಿರಬೇಕು ಎಂದು ಖಚಿತವಾಯಿತು. ನನಗೆ ತಿಳಿದ ಹಾಗೆ ಅವನಿಗೆ ಇನ್ನು ಯಾವ ಹಿರಿಯ ಆತಂಕವೂ ಇರಲಿಲ್ಲ. ಅಣಿಯಾದ ಆದರೆ ತುಂಬಿದ ಸಂಸಾರ. ಭಾರೀ ವ್ಯಾಪಾರವನ್ನು ಮಾಡುತ್ತಿದ್ದನಾದರೂ ಸಾಲದ ಸೋಂಕೂ ಇರಲಿಲ್ಲ. ಬೆಳೆದ ಹೆಣ್ಣುಮಕ್ಕಳು ಮದುವೆಗೇನೂ ಇರಲಿಲ್ಲ. ಮತ್ತೇನು ಗುನುಗು ಇವನಿಗೆ ?

ಅವನ ಮಂಡಿಯ ಮುದಿ ಮುತ್ಸದ್ದಿಗೆ ಸಕ್ಕರೆ ಬೇನೆಯಿತ್ತು. ಚಿನ್ನಯ್ಯನ ತಂದೆಯ ಕಾಲದಿಂದ ಮಂಡಿಯ ನಂಬಿಕಸ್ಥ ನೌಕರನಾಗಿದ್ದ. ಅವನಿಗೆ ಬೆನ್ನು ಫಣಿ ಎದ್ದಿತ್ತು. ಬೇನೆಯು ಉಗ್ರವಾಗಿದ್ದುದರಿಂದ ಆಸ್ಪತ್ರೆಗೆ ಸೇರಿಸಿದ್ದರು. ವಾರ್ಡ್ ಡಾಕ್ಟರಿಗೆ ನೀವೂ ಒಂದು ಮಾತು ಹೇಳಿ, ಹೆಚ್ಚು ಆಸಕ್ತಿಯಿಂದ ಚಿಕಿತ್ಸೆ ನಡೆಸಲಿ, ಎಂದು ನನ್ನಿಂದ ಒಂದು ಶಿಫಾರಸು ಕಾಗದವನ್ನೂ ತೆಗೆದುಕೊಂಡು ಹೋದ. ಆ ಸಪ್ಪೆ ಕಾಗದಕ್ಕಿಂತ ಗರಿಗರಿಯಾದ ನೋಟ್ ಕೆಲವನ್ನು ಕೊಟ್ಟರೆ, ಹೆಚ್ಚು ಪ್ರಯೋಜನವಾದೀತು, ಎಂದು ಹೇಳಿದರೂ ಚಿನ್ನಯ್ಯ ಕೇಳಲಿಲ್ಲ. ಏನು ಮಾಡಿದರೂ ಮುತ್ಸದ್ದಿ ಉಳಿಯಲಿಲ್ಲ, ತೀರಿಕೊಂಡ.

ತರಚಿದ ಗಾಯಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದಾಗ, ಮುತ್ಸದ್ದಿ ತೀರಿಕೊಂಡಿದ್ದನ್ನು ಹೇಳಿದ. ಅಂತಹ ನಂಬಿಕಸ್ಥ ಮುತ್ಸದ್ಧಿಯನ್ನು ಕಳೆದುಕೊಂಡುದಕ್ಕಾಗಿ ಸಂತಾಪವನ್ನು ಸೂಚಿಸಿದೆ. ಆದರೆ ಚಿನ್ನಯ್ಯನ ಪ್ರತಿಕ್ರಿಯೆ ಅಚ್ಚರಿಯನ್ನುಂಟು ಮಾಡಿತು.

'ಹಾಳು ಮುದುಕ ಸತ್ತು ಹೋಗಿದ್ದು ಒಳ್ಳೆಯದೇ ಆಯಿತು. ಹಳಬ ಎಂದು ಸದರ ತೆಗೆದುಕೊಂಡು ಮೇಲಿಂದ ಮೇಲೆ ಹಣವನ್ನು ಬೇಡುತ್ತಿದ್ದ.