ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೨

ಮನಮಂಥನ

ಬಂದರೆ ಎದೆ ಡವಡವ ಅಂತ ಹೊಡೆದುಕೊಳ್ಳುತ್ತಿತ್ತು. ಮಧ್ಯೆಮಧ್ಯೆ ಒಂದೆರಡು ನಾಡಿ ಬಡಿತವು ತಪ್ಪಿಯೂ ಹೋಗುತ್ತಿತ್ತು.

ಹೃದಯದ ಪ್ರವೀಣರು ಬಂದರು. ಇ.ಸಿ.ಜಿ. ತೆಗೆದರು. ಹೃದಯದಲ್ಲಿ ಯಾವ ಮೂಲಭೂತವಾದ ದೋಷವೂ ಕಾಣಿಸುವುದಿಲ್ಲ. ಆದರೂ ಹೃದಯವು ಬಳಲಿರಲೂ ಸಾಧ್ಯ. ಆದುದರಿಂದ ಪೂರ್ಣ ವಿಶ್ರಾಂತಿಯನ್ನು ತೆಗೆದುಕೊಂಡರೆ ಒಳ್ಳೆಯದು, ಎಂದು ಸಲಹೆ ಮಾಡಿದರು. ಪೂರ್ಣ ವಿಶ್ರಾಂತಿಗೆಂದು ತವರಿಗೆ ಕಳಿಸಿದರೆ ಹೇಗೆ ಎಂದು ಶಾಮಾನಾಯ್ಕ ತಂದೆಯನ್ನು ಕೇಳಿದ. ಹಳ್ಳಿಗಾಡಿನಲ್ಲಿ ಗಾಳಿಬೆಳಕು ಪಸಂದಾಗಿರುತ್ತೆ. ತೌರಿನ ವಾತಾವರಣ ಕೂಡ ಕಳುಹಿಸಿಕೊಡು ಎಂದರು ಪಟೇಲರು.

ತೌರಿಗೆ ಲಚ್ಚಮ್ಮಣ್ಣಿ ಬಂದಳು. ಶ್ರೀಮಂತ ಮಗಳು ಬಡ ತೌರಿಗೆ ಬಂದರೆ. ತಾಯ್ತಂದೆಯರ ಅಕ್ಕರೆಯನ್ನು ವಿವರಿಸಬೇಕೆ? ದೇವರಾಯಿತು, ದಿಂಡರಾಯಿತು; ಮಂತ್ರಮಾಟವೆಲ್ಲಾ ಆದುವು. ಹತ್ತಾರು ಹಿರಿಯ ಮುತ್ತೈದೆಯರು ಬಂದು ದೃಷ್ಟಿ ತೆಗೆದರು, ಮಣ ಮಣ ಪೊರಕೆ ಸುಟ್ಟರು. ಯಾವುದರಿಂದಲೂ ಲಚ್ಚಮ್ಮಣ್ಣಿಗೆ ಗುಣ ಕಾಣಬರಲಿಲ್ಲ. ಮಲಗಿದ್ದವಳು ಎದ್ದು ಕೂತರೆ ಡವಡವ ಆಡುತ್ತಿತ್ತು, ಹೃದಯ. ಷಹರಿನ ದೊಡ್ಡ ದೊಡ್ಡ ವೈದ್ಯರುಗಳು ನೋಡಿದ್ದಾಯಿತು. ಇನ್ನು ಹಳ್ಳಿಯ ಅಳಲೇಕಾಯಿ ಪಂಡಿತರಿಗೆ ತೋರಿಸಿ ಏನು ಪ್ರಯೋಜನ? ಎಂದು ತೌರಿನವರು ಮಂತ್ರ ಪೂಜೆಗೆ ಪ್ರಾರಂಭಿಸಿದರು. ಅದೂ ನಿರರ್ಥಕವಾಗಲು, ಪಂಡಿತರನ್ನು ಒಂದು ಮಾತು ಕೇಳೋಣ ಎಂದುಕೊಂಡರು. ಪಂಡಿತರೂ ಬಂದರು.

'ನಿನಗೆಂತಹ ಸುಸ್ತೇ ಇರಲೀ, ಲಚ್ಚಮ್ಮ, ಸರಿಯಾಗಿ ಗಿಡಗಿಕೊಂಡಾದರೂ ಊಟಮಾಡು. ಅದು ಜೀರ್ಣವಾಗುವ ಹಾಗೆ ಲೇಹವನ್ನು ಕೊಡ್ತೀನಿ. ಆಹಾರವು ಪಚನವಾದರೆ, ಶಕ್ತಿ ಬರಲೇಬೇಕು, ಸುಸ್ತು ಹೋಗಲೇಬೇಕು.' ಎಂದು ಪಂಡಿತರು ಹೇಳಿದರು. ಹಿರಿಯ ವಯಸ್ಸು ಪಂಡಿತರಿಗೆ, ಲಚ್ಚಮ್ಮಣ್ಣಿಯನ್ನು ಲಂಗದ ವಯಸ್ಸಿನಿಂದಲೂ ಬಲ್ಲವರು. ಈಗ ಶ್ರೀಮಂತಿಕೆಯಾಗಿದ್ದಾಳೆ. ದೊಡ್ಡ ಅಧಿಕಾರಿಯ ಹೆಂಡತಿ ಆಗಿದ್ದಾಳೆ ಎನ್ನುವ ಭಾವನೆಯೇನೂ ಅವರನ್ನು ಕಾಡಲಿಲ್ಲ. ಆತ್ಮೀಯವಾಗಿ ಮಾತನಾಡಿದರು.

'ಹಸಿವೇನೋ ಆಗುತ್ತೆ ಪಂಡಿತರೆ, ಬಾಯಿ ರುಚಿಯೂ ಅಷ್ಟಾಗಿ ಕೆಟ್ಟಿಲ್ಲ. ಆದರೆ ಒಂದೆರಡು ತುತ್ತು ಅನ್ನವನ್ನು ಬಾಯಿಗಿಟ್ಟುಕೊಂಡು, ನುಂಗಲೆತ್ನಿಸಿದರೆ, ಎದೆಯಿಂದ ಏನೋ ಎದ್ದು ಬಂದು ತುತ್ತನ್ನು ಹೊರಕ್ಕೆ ವದ್ದಂತಾಗುತ್ತದೆ.