ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೬

ಮನಮಂಥನ

ಆಗುತ್ತದೆ. ಆದುದರಿಂದಲೇ ಸಾಹಿತ್ಯವು ಸಾಮಾನ್ಯವಾಗಿ ಜನಪ್ರಿಯವಾಗಿರುವುದು. ಸಾಹಿತ್ಯದಿಂದ ಹಿತ ದೊರಕುವುದರ ಜತೆಗೆ ವಿಹಿತವಾಗಿ ನಡೆದುಕೊಳ್ಳುವ ಉಪದೇಶವೂ ಇದ್ದೇ ಇರುತ್ತದೆ. ಗಂಭೀರವಾದ ಮತ್ತು ಹೇರಳ ಅನುಭವಾನಂತರ ಬರೆದ ಪರಿಪಕ್ವ ಸಾಹಿತ್ಯವು ಈ ರೀತಿ ಪ್ರಯೋಜನಕಾರಿಯಾಗುತ್ತದೆ.

ಮನೋವೈಜ್ನಾನಿಕಗಳು Suggestion, Persuasion; Psycho-Analysis ಎಂಬ ಮೂರು ಮಾನಸಿಕ ಚಿಕಿತ್ಸಾ ಕ್ರಮಗಳನ್ನು ಬಳಸುತ್ತಾರೆ. ಹೆಸರೇ ಸೂಚಿಸುವಂತೆ, Suggestion “ನೀನು ಆರೋಗ್ಯವಾಗಿದ್ದಿ ; ಮೂಲಭೂತವಾಗಿ ಚೆನ್ನಾಗಿದ್ದಿ ; ಈಗ ಕಾಡುತ್ತಿರುವ ಆತಂಕವು ಕೇವಲ ತಾತ್ಕಾಲಿಕ. ಮನಸ್ಸಿನ ಕಲ್ಪನೆ ಅದು. ಅದಕ್ಕೆ ಬೆದರಬೇಡ, ಧೈರ್ಯ ತಂದುಕೋ' ಎಂದು ಉಪದೇಶಿಸುವ ವಿಧಾನ.

ತೀವ್ರ ಆತಂಕಕ್ಕೆ ಒಳಗಾದ ಅರ್ಜುನನಿಗೆ, ಶ್ರೀಕೃಷ್ಣನ ಗೀತೋಪದೇಶದಲ್ಲಿ Suggestion ಬಲವಾಗಿದೆ.

ಹೇಳಿದ್ದನ್ನೇ, ವಿವಿಧ ರೀತಿಗಳಲ್ಲಿ ಪುನಃ ಪುನಃ ಹೇಳಿ; ಹೇಳಿದ್ದು, ಕೇಳಿದವನಿಗೆ ಮನದಟ್ಟಾಯಿತು ಎನ್ನುವಂತೆ, ಒತ್ತಾಯಪಡಿಸುವುದೇ Persuasion. ಆತಂಕವು ಮುತ್ತಿದವರಲ್ಲಿ, ಮನಸ್ಸು ಆತಂಕದಿಂದಲೇ ತುಂಬಿ ತುಳುಕುತಿರುತ್ತದೆ. ಇತರ ವಿಷಯಗಳನ್ನು ಗ್ರಹಿಸುವ ಶಕ್ತಿಯು ಬಹಳಷ್ಟು ಕಡಿಮೆಯಾಗಿರುತ್ತದೆ.

ಅಂತಹ ಪರಿಸ್ಥಿತಿಯಲ್ಲಿ ಪುನಃಪುನಃ ಹೇಳಲೇಬೇಕು. Persuade ಮಾಡಲೇಬೇಕು.

ಗೀತೋಪದೇಶದಲ್ಲಿ ಪುನಃಪುನಃ ಉಪದೇಶಿಸುವುದನ್ನು ಸ್ಪಷ್ಟವಾಗಿ ಕಾಣಬಹುದು. ಹೇಳಿದ್ದನ್ನೇ ಹೇಳುತ್ತಾನಲ್ಲ, ಶ್ರೀಕೃಷ್ಣ ಎಂದು ಮಾನಸಿಕ ಸ್ವಾಸ್ಥ್ಯವಿದ್ದವರಿಗೆ ಅನಿಸಿ ಬೇಸರವೂ ಆಗುತ್ತದೆ. ಆದರೆ ಉಪದೇಶವು ಆತಂಕದಿಂದ ನರಳುತ್ತಿರುವವರಿಗೆ ಎನ್ನುವುದನ್ನು ನೆನೆಸಿಕೊಂಡರೆ, ಪುನಃಪುನಃ ಉಪದೇಶಿಸುವುದರ ಔಚಿತ್ಯವು ಸ್ಪಷ್ಟವಾಗುತ್ತದೆ.

ಇದಾದ ಮೇಲೆ PsychoAnalysis ಮನಸ್ಸಿನ ವಿಶ್ಲೇಷಣೆ. ಆತಂಕದಿಂದ ಮನಸ್ಸು ತಳಮಳಗೊಂಡಿದೆ ; ಕುದಿಯುತ್ತಿದೆ. ಮನಸ್ಸಿನ ಸ್ವರೂಪವೇನು? ಎಂಬುದನ್ನು ಎಳೆಎಳೆಯಾಗಿ ಸರಳವಾಗಿ ಅರಿತರೆ, ಆಗ ಆತಂಕದ ಆರ್ಭಟವೂ ಶಮನವಾಗುತ್ತದೆ.

ಗೀತೋಪದೇಶದಲ್ಲಿ, ಸಾಂಖ್ಯಯೋಗದ ಪ್ರಕರಣವೂ ವಿಶ್ವರೂಪದರ್ಶನದ ಅಧ್ಯಾಯವೂ ಮನಸ್ಸಿನ ಸ್ವರೂಪವನ್ನೂ, ಅದರ ಮೂಲ ಅಂತ್ಯಗಳನ್ನೂ, ಅದು ಬೆದರಿ ಹೆದರುವ ಕಾರಣಗಳನ್ನೂ ವಿಶ್ಲೇಷಿಸಿ ಸುಲಭವಾಗಿ ತಿಳಿಸುವಲ್ಲಿ