ಮನಮಂಥನ
ಎನ್ನುವುದು ಕೇವಲ ನಿಮಿತ್ತ ಮಾತ್ರ ಎನ್ನುವುದನ್ನು ಅರಿತುಕೊಂಡ. ಅನಂತರ ಬಾಳಿನಲ್ಲಿ ತಾನು ಮಾಡಬೇಕಾದ ಕಾರ್ಯವನ್ನು ದೃಢಮನಸ್ಸಿನಿಂದ ಮಾಡಲು ಸಾಧ್ಯವಾಯಿತು.
ಆತಂಕದಿಂದ ನರಳುವ ರೋಗಿಗಳಿಗೆ ಮನೋವೈದ್ಯರು ಇಂದು ನಡೆಸುವ ಚಿಕಿತ್ಸಾ ಕ್ರಮಗಳಲ್ಲಿ ಮೂರು ಮುಖ್ಯ ಹಂತಗಳಿವೆ. (೧) Suggestion ರೋಗಿಯ ಮನಸ್ಸಿನಲ್ಲಿ ಧೈರ್ಯತುಂಬುವಂತೆ ಸಲಹೆ ಮಾಡುವುದು. ಆತ್ಮವಿಶ್ವಾಸವನ್ನು ಅಂಕುರಿಸುವುದು, (೨) Persuasion ಒತ್ತಾಯ ಮಾಡಿ, ಪುನಃ ಪುನಃ ವಿಧವಿಧ ರೀತಿಯಲ್ಲಿ ಉಪದೇಶಿಸಿ, ಮನಸ್ಸಿನ ಆತಂಕವನ್ನು ಕರಗಿಸುವುದು ; ಮನಸ್ಸನ್ನು ದೃಢಪಡಿಸುವುದು, (೩) Psycho-Analysis ಮನಸ್ಸಿನ ಮರ್ಕಟತನವನ್ನು ಎಳೆಎಳೆಯಾಗಿ ವಿಶ್ಲೇಷಿಸಿ, ಜಾಣ ರೋಗಿಗೆ ಮನದಟ್ಟಾಗುವಂತೆ ಶಾಸ್ತ್ರೀಯವಾಗಿ ಮಾಡುವುದು. ಈ ಮೂರು ಹಂತಗಳನ್ನೂ ಅರ್ಜುನನ ಆತಂಕನಿವಾರಣೆಗೆ ಶ್ರೀಕೃಷ್ಣ ಬಳಸಿಕೊಂಡ, ಯಶಸ್ವಿಯಾಗಿ ಬಳಸಿಕೊಂಡ. ಭಗವದ್ಗೀತೆಯಲ್ಲಿ, ಹೇಳಿದ್ದನ್ನೇ ಪುನಃಪುನಃ ಹೇಳುವ, ಪುನರುಕ್ತಿಗಳೂ ಬಹಳವಾಗಿವೆ. Persuasion ಚಿಕಿತ್ಸೆಗೆ, ಪುನರುಕ್ತಿಯು ಅತ್ಯಗತ್ಯ. ಎರಡನೆಯ ಅಧ್ಯಾಯದಲ್ಲಿ 'ನಾನು' 'ನನ್ನದು' ಎನ್ನುವುದರ ಮನೋವಿಶ್ಲೇಷಣೆಯು ಪರಿಪೂರ್ಣವೂ ಗಂಭೀರವೂ ಆದುದ್ದಾಗಿದೆ.
ಈಗಿನ ಕಾಲದವರು ಅರ್ಜುನನಿಗಿಂತ ಸ್ವಲ್ಪ ಹೆಚ್ಚು ಅದೃಷ್ಟವಂತರು. ಏಕೆಂದರೆ, ಆತಂಕಗೊಂಡ ಮನಸ್ಸನ್ನು ಸಮಾಧಾನಪಡಿಸುವ, ಪ್ರಭಾವಯುತವಾದ ಶಾಂತಿಕಾರಕ ಔಷಧಿಗಳು-Tranquillisers-ಅರ್ಜುನನ ಕಾಲದಲ್ಲಿ ಇರಲಿಲ್ಲ. ಮಸಲಾ ಅಂತಹ ಮೂಲಿಕೆಗಳಿದ್ದಿದ್ದರೂ, ಅವುಗಳನ್ನು ಜನರು ಬಳಸುತ್ತಿದ್ದಿದ್ದರೂ, ಶ್ರೀ ಕೃಷ್ಣ ಅಂತಹವುಗಳನ್ನು ಅರ್ಜುನನ ಮೇಲೆ ಉಪಯೋಗಿಸಿದ ಎಂದು ಎಲ್ಲೂ ವಿವರಿಸಿಲ್ಲ.
ಆದರೆ ಇಂದಿನ ರೋಗಿಗಳಿಗೆ ಈ ಸೌಲಭ್ಯವು ವಿಫುಲವಾಗಿ ದೊರೆಯುತ್ತದೆ. ಇವುಗಳ ಪ್ರಯೋಗದಿಂದ ಆತಂಕವು ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಆದರೆ ಗೊಂದಲಮಯವಾದ ಮನಸ್ಸು ಸ್ವಲ್ಪ ಶಾಂತಿಯನ್ನು ಪಡೆಯುತ್ತದೆ. ಆಗ, ಮಾಡಿದ ಉಪದೇಶವು, ರೋಗಿಯ ಮನಸ್ಸಿಗೆ ಸುಲಭವಾಗಿ ಹತ್ತುತ್ತದೆ. ಹಾಗಾಗಿ ಪರಿಣಾಮಕಾರಿಯಾಗುತ್ತದೆ. ತೀವ್ರ ಆತಂಕದಿಂದ ನರಳುತ್ತಿರುವಾಗ, ಯಾರು ಏನನ್ನು ಉಪದೇಶಿಸಿದರೂ, ಗೋರ್ಕಲ್ಲ ಮೇಲೆ ಮಳೆಗರೆದಂತಾಗುತ್ತದೆ. ಶಾಂತಿಕಾರಕ ಔಷಧಿಗಳ ಸೂಕ್ತ ಬಳಕೆಯಿಂದ, ಮನಸ್ಸಿನ ತಲ್ಲಣವನ್ನು ಕಡಿಮೆ ಮಾಡಿದರೆ, ಅನಂತರ ಉಪದೇಶವು ಉಪಯುಕ್ತವಾಗುತ್ತದೆ.