ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೦

ಮನಮಂಥನ

ನುಡಿದಾಗ, ಔದಾರ್ಯದ ಉರುಲು ಬಿಗಿಯಿತು. ಭವಿಷ್ಯದ ಅವ್ಯಕ್ತ ಭಯವು, ಆತಂಕವೂ ಕೂಡಿಕೊಂಡು, ಉಲ್ಬಣವಾಗಿ ಮನಸ್ಸಿಗೆ ದಿಗ್ಧಮೆಯನ್ನು ಹಿಡಿಸಿತು.

ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದಾಗ ಚಿಗುರಲು ಸಾಧ್ಯವೇ? ಕೋಪದಲ್ಲಿ ತಾನಾಡಿದುದೂ, ಅತ್ತಿಗೆಯು ಸಿಡುಕಿದುದೂ, ಇವನ ಮನಸ್ಸಿನಲ್ಲಿ ಪಟ್ಟೆ ಪಟ್ಟೆ ಬರೆಯನ್ನು ಹಾಕಿದಂತಾಯಿತು. ನುಡಿದ ಮಾತು, ಒಡೆದ ಮುತ್ತಿನಂತೆಯೇ ! ಎಷ್ಟೋಬಾರಿ ನುಡಿದ ಮಾತು ಕೇಳಿಸಿಕೊಂಡವನ ಮನಸ್ಸನ್ನು ಒಡೆದುಬಿಡುತ್ತದೆ.

ಗೆಳೆಯ ವೈದ್ಯರೊಬ್ಬರು ಒಮ್ಮೆ ವಿಷಾದದಿಂದ ಹೇಳಿದರು, ತಮ್ಮ ಅನುಭವವನ್ನು. ವಿದ್ಯಾವಂತನಾಗಿದ್ದ, ಮಧ್ಯವಯಸ್ಸಿನ, ಸಂನ್ಯಾಸಿಯೊಬ್ಬನು, ತೊಡೆಯ ಮೇಲೆ ಮಚ್ಚೆ ಏಳುತ್ತಿದ್ದುದನ್ನು ಕಂಡ. ನನ್ನ ಗೆಳೆಯರ ಬಳಿಗೆ ವೈದ್ಯ ಸಲಹೆಗಾಗಿ ಹೋದ. ಅವನನ್ನು ಅಮೂಲಾಗ್ರವಾಗಿ ವೈದ್ಯರು ಪರೀಕ್ಷಿಸಿದರು. ಚರ್ಮದ ಒಂದು ಚೂರನ್ನೂ ಮತ್ತು ರಕ್ತವನ್ನೂ ಪರೀಕ್ಷೆಯ ಸಲುವಾಗಿ ತೆಗೆದುಕೊಂಡರು. 'ಇಷ್ಟೆಲ್ಲಾ ಪರೀಕ್ಷೆಗಳೇಕೆ? ಯಾವುದಾದರೂ ಮುಲಾಮಿನಿಂದ ವಾಸಿಯಾಗುವುದಿಲ್ಲವೇ ?' ಎಂದು ಸಂನ್ಯಾಸಿಗಳು ಕೇಳಿದರು. 'ಇಂತಹ ವಿವರವಾದ ಪರೀಕ್ಷೆಗಳ ಅಗತ್ಯವಿದೆ. ಮಸಲಾ ಇದೇನಾದರೂ ಕುಷ್ಟರೋಗದ ಪ್ರಾರಂಭವಾಗಿದ್ದರೆ, ಈಗಲೇ ಖಚಿತಪಡಿಸಿಕೊಂಡು, ತಕ್ಕ ಚಿಕಿತ್ಸೆಯನ್ನು ಮಾಡಬೇಕು' ಎಂದರು ಡಾಕ್ಟರು. 'ಇನ್ನು ಮೂರು ದಿನಗಳ ನಂತರ ಬನ್ನಿ. ಆ ವೇಳೆಗೆ ಫಲಿತಾಂಶಗಳು ಸಿದ್ಧವಾಗಿರುತ್ತವೆ.' ಎಂದು ಹೇಳಿ, ಸಂನ್ಯಾಸಿಯನ್ನು ಬೀಳ್ಕೊಟ್ಟರು. ಮೂರು ದಿನಗಳಾದ ಮೇಲೆ ಫಲಿತಾಂಶಗಳೇನೋ ಬಂದುವು. ಕುಷ್ಟರೋಗದ ಯಾವ ಸೂಚನೆಯೂ ಇರಲಿಲ್ಲ. ಆದರೆ ಸಂನ್ಯಾಸಿಯು ಡಾಕ್ಟರ ಬಳಿಗೆ ಹಿಂತಿರುಗಿ ಬರಲೇ ಇಲ್ಲ. ಆ ಸಂನ್ಯಾಸಿಯ ತೇಜಸ್ವೀ ಮುಖವನ್ನು ಕಂಡಾಗ, ಡಾಕ್ಟರಿಗೆ ಗೌರವ ಭಾವನೆಯುಂಟಾಗಿತ್ತು. ಈ ಒಳ್ಳೆಯ ಸುದ್ದಿಯನ್ನು ಅವರಿಗೆ ತಿಳಿಸಬೇಕು ಎಂಬ ಹಂಬಲದಿಂದ, ಸಂನ್ಯಾಸಿಯ ವಿಳಾಸವನ್ನು ಪತ್ತೆಹಚ್ಚಿ, ಆ ಮಠಕ್ಕೆ ಹೋದರು. ಅಲ್ಲಿದ್ದ ಹಿರಿಯ ಸಂನ್ಯಾಸಿಯನ್ನು ಭೇಟಿಯಾಗಿ, ಇಂತಹ ಹೆಸರಿನ, ಈ ವಿಳಾಸದಲ್ಲಿದ್ದ ಸಂನ್ಯಾಸಿಗಳು, ನನ್ನ ಬಳಗೆ ಬಂದಿದ್ದರು; ತಿರುಗಿ ಬರಲಿಲ್ಲ. ಅವರಿಗೆ ಸುದ್ದಿ ತಿಳಿಸಿ ಹೋಗೋಣ ಎಂದು ನಾನೇ ಬಂದೆ. ಚರ್ಮದಲ್ಲಿ ಎದ್ದಿದ್ದ ಮಚ್ಚೆಯು ಕುಷ್ಟರೋಗದಿಂದಲ್ಲ ಎಂದು ಹೇಳಲು ಬಂದೆ. ಅವರೆಲ್ಲಿ ?' ಎಂದು ಕೇಳಿದರು ; ವಿವರಗಳನ್ನು ತಿಳಿಸಿ.

ಹಿರಿಯ ಸಂನ್ಯಾಸಿಗಳು ನಿಟ್ಟುಸಿರುಬಿಟ್ಟು ಹೀಗೋ, ಸಮಾಚಾರ, ನನಗೆ