ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೭೧

ತಿಳಿದಿರಲಿಲ್ಲ. ಮೂರು ದಿನಗಳ ಹಿಂದೆ ಆತ ರೈಲು ಕಂಬಿಯ ಮೇಲೆ ಮಲಗಿ, ರಾತ್ರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ತುಂಬಾ ವಿನಯಶೀಲ, ಪ್ರಗಲ್ಬವಾದ ಪಾಂಡಿತ್ಯವಿತ್ತು. ಅವನೇಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಶಂಕಿಸುತ್ತಿದ್ದೆ, ನೀವು ಹೇಳಿದ ಮೇಲೆ ಈಗ ಅರ್ಥವಾಯಿತು. ಶುಚಿಯಾದ ದೇಹ, ನಿರ್ಮಲ ಮನಸ್ಸು ಆರೋಗ್ಯಕರ ಆಚಾರ ಎಲ್ಲವೂ ಇದ್ದ ನನಗೆ ಕುಷ್ಟರೋಗವು ಬಂದುದೇಕೆ ಎನ್ನುವ ಆತಂಕ ಹತ್ತಿರಬೇಕು. ತೀವ್ರ ಜುಗುಪ್ಪೆಯೂ ಉಂಟಾಗಿರಬೇಕು. ಆತಂಕವು ಉತ್ಕಟವಾಗಿ, ಅಸಾಧ್ಯ ಜುಗುಪ್ಪೆಯಲ್ಲಿ ಪರಿಣಮಿಸಿದರೆ, ಆತ್ಮಹತ್ಯೆಯು ಕೂಡ ಸಾಧ್ಯ. ಎಲ್ಲವನ್ನೂ ಸ್ವಯಂಪ್ರೇರಣೆಯಿಂದ, ಪ್ರೌಢವಯಸ್ಸು ಬಂದ ಮೇಲೆ, ಪರಿತ್ಯಾಗ ಮಾಡಿ ಸಂನ್ಯಾಸಿಯಾದವನಿಗೂ ಹೀಗಾದರೆ, ಸಾಮಾನ್ಯ ಜನರ ಪಾಡು ಏನೇನಾಗಬಹುದು ?' ಎಂದು ಹೇಳಿದರು.

ಗೆಳೆಯ ಡಾಕ್ಟರಿಗೆ ಇಂದೂ ಈ ಘಟನೆಯು ಕುಕ್ಕುತ್ತಲೇ ಇದೆ. ಕುಷ್ಟರೋಗದ ಸಂಶಯವಿದೆ. ಅದನ್ನು ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದು ತಪ್ಪಾಯಿತೇನೋ ? ಎನ್ನುವ ಕೊರಗು ಕಾಡುತ್ತಲೇ ಇದೆ.

ಆತ್ಮಹತ್ಯೆಯನ್ನು ಮಾಡಿಕೊಂಡ ಸಂನ್ಯಾಸಿಗಾದರೂ, ಕೇಳಿದ ಕೆಟ್ಟ ಸುದ್ದಿಯಿಂದ, ಆತಂಕವು ಕಾಣಿಸಿಕೊಳ್ಳುವ ಮೊದಲೇ, ಅತ್ಯುಗ್ರವಾಗಿ ತೀವ್ರ ಜುಗುಪ್ಪೆಯಲ್ಲಿ ಲೀನವಾಯಿತು. ಈ ಅವಸ್ಥೆಯು ಸ್ವಲ್ಪ ಕಾಲವೇ ಇರುವುದು. ಅಂತಹ ಪರಿಸ್ಥಿತಿಯಲ್ಲಿ ಸ್ನೇಹಿತರಾದರೂ ಅವರೊಂದಿಗೆ ಇದ್ದಿದ್ದರೆ, ಜುಗುಪ್ಪೆಯ ತೀವ್ರತೆಯನ್ನು ಶಮನಮಾಡಬಹುದಿತ್ತು. ಆತ್ಮಹತ್ಯೆಯೂ ಆಗುತ್ತಿರಲಿಲ್ಲ. ಅನಂತರ ಆತಂಕದ ಚಿಹ್ನೆಗಳು ಕಾಡುತ್ತಿದ್ದುವು. ಪರೀಕ್ಷೆಯ ಫಲಿತಾಂಶಗಳು ಆತಂಕದ ಕಾರಣವನ್ನು ನಿವಾರಿಸಿದ ಮೇಲೆ, ಆತ ಸ್ವಸ್ಥವಾಗುತ್ತಿದ್ದ. ಆದರೆ? ವಿಧಿ ಎನ್ನದೇ ಬೇರೇನನ್ನೂ ಹೇಳಬರುವುದಿಲ್ಲ.

೮. ವೈದ್ಯಜನಿಕ ಆತಂಕ ಆತಂಕದ ಶಮನಕ್ಕಾಗಿ ವೈದ್ಯರಲ್ಲಿಗೆ ಹೋಗುವುದು ನ್ಯಾಯ. ಆದರೆ ವೈದ್ಯರಲ್ಲಿಗೆ ಸಲಹೆಗೆಂದು ಹೋದ ಮೇಲೆ, ಅವರಾಡಿದ ಮಾತುಗಳಿಂದಲೇ ಹೊಸ ಹೊಸ ಆತಂಕಗಳು ಹುಟ್ಟಿಕೊಂಡರೆ ? ಪರಮ ಅನ್ಯಾಯ. ಆದರೆ ಇದು ಆಗುತ್ತಲೇ ಇದೆ. ವೈದ್ಯವಿಜ್ಞಾನದಲ್ಲಿ ಪ್ರಗತಿಯು ನಡೆದಷ್ಟೂ, ಪ್ರಗತಿಯ ಪ್ರಚಾರವು ಸಾರ್ವಜನಿಕರಲ್ಲಿ ಹೆಚ್ಚಾದಷ್ಟೂ ವೈದ್ಯಜನಿಕ ಆತಂಕಗಳೂ ಅತಿಯಾಗುತ್ತವೆ.