ಮನಮಂಥನ
ಡೈಜೆಸ್ಟ್ ಓದುವ ನರಸಪ್ಪ
ವಿಧವಿಧ ಡೈಜೆಸ್ಟ್ ಪತ್ರಿಕೆಗಳನ್ನು ಓದುವ ಅಭ್ಯಾಸ ನರಸಪ್ಪನಿಗೆ ಸಾಕಷ್ಟು ಸಂಪಾದಿಸುತ್ತಿದ್ದ ಇಂಜಿನಿಯರಿಂಗ್ ಕಂಟ್ರಾಕ್ಟರ್ ನರಸಪ್ಪನಿಗೆ ನಲವತ್ತರ ಪ್ರಾಯ. ಮಧ್ಯಾಹ್ನ ಭೋಜನಾನಂತರ ಒಂದತ್ತು ನಿಮಿಷ ವಿಶ್ರಮಿಸಿಕೊಳ್ಳುವ ಅಭ್ಯಾಸ. ಕೆಲವು ವರ್ಷಗಳ ಹಿಂದೆ ಡೈಜೆಸ್ಟ್ ಪತ್ರಿಕೆಯೊಂದರಲ್ಲಿ ಭೋಜನಾ ನಂತರದ ವಿಶ್ರಾಂತಿಯ ಸತ್ಫಲಗಳನ್ನು ಓದಿದ ಮೇಲೆ, ಈ ಅಭ್ಯಾಸವನ್ನು ಮಾಡಿಕೊಂಡಿದ್ದ. ಅವತ್ತು ಮಧ್ಯಾಹ್ನ ಮಂಚದ ಮೇಲೆ ಅಡ್ಡಾದಾಗ ಎದೆಯಲ್ಲಿ ಒಂದು ತರಹ ನೋವು ಕಾಣಿಸಿತು. ಒಂದರಕ್ಷಣ ಆ ನೋವು ಎಡತೋಳಿಗೆ ಹರಡಿ ಬೆರಳುಗಳಿಗೂ ತಟ್ಟಿದಂತಾಯಿತು. ಎಲ್ಲಾ ಮಿಂಚಿನಂತೆ ಕ್ಷಣಾಂಶದಲ್ಲಿ ಅನುಭವವಾಯಿತು. ತದನಂತರ ತೋಳನ ತರಹ ಚೆನ್ನಾಗಿಯೇ ಇದ್ದ. ಆದರೆ ಡೈಜೆಸ್ಟ್‌ಗಳನ್ನು ಓದಿದ ವಿದ್ಯಾವಂತನಿಗೆ, ಅಂಜೈನಾ : ಕಾರೊನರಿ ಆಟಾಕ್ ; ಇತ್ಯಾದಿಗಳ ಸ್ಮರಣೆ ಬಾರದೆ ಇರುತ್ತದೆಯೆ ? ಅವುಗಳೇನಾದರೂ ಇರಬಹುದೇ ಎಂದು ಅನುಮಾನಿಸಿದ. ಮರುಕ್ಷಣದಲ್ಲೇ ನೆನಪಾಯಿತು : ಹಿಂದಿನ ರಾತ್ರಿ ಪಾರ್ಟಿಗೆ ಹೋಗಿ ಹಸಿವು ಬಾಯಾರಿಕೆಗಳನ್ನು ಬಿರಿಯಾನಿ ಬ್ರಾಂದಿಗಳಿಂದ ಕಂಠಪೂರ್ತಿ ಸಂತುಷ್ಟಿಪಡಿಸಿದ್ದು, ಅದರ ಪ್ರಭಾವದಿಂದಲೂ ಹೀಗಾಗಬಹುದು ಎಂಬುದೂ ನರಸಪ್ಪನಿಗೆ ಗೊತ್ತು. ಅದನ್ನೂ ಡೈಜೆಸ್ಟ್ ಪತ್ರಿಕೆಗಳೂ ವಿವರಿಸಿದ್ದುವು. ಏನೇ ಇರಲಿ ; ಮೊಳಕೆಯಲ್ಲೇ ಚಿವುಟಿಹಾಕಿದರೆ, ರೋಗವು ಪ್ರಬಲಗೊಳ್ಳುವುದಿಲ್ಲ. ಮುಂಜಾಗ್ರತೆಯನ್ನು ವಹಿಸಿದರೆ ಎಂದಿಗೂ ಕ್ಷೇಮ. ಡಾಕ್ಟರ ಬಳಿಗೆ ಹೋಗಿ ಪರೀಕ್ಷಿಸಿಕೊಳ್ಳೋಣ ಎಂದು ನರಸಪ್ಪ ಯೋಚಿಸಿದ. ತತ್‌ಕ್ಷಣ ಕಾರಿನಲ್ಲಿ ಡಾಕ್ಟರ ಬಳಿಗೆ ಹೋದ.
ವಿವರವಾಗಿ ಪರೀಕ್ಷೆಯನ್ನು ಡಾಕ್ಟರು ಮಾಡಿದರು. ಪಾರ್ಟಿಯ ವೈಭವದ ಚರಿತ್ರೆಯನ್ನೂ ಪಡೆದರು. 'ನಿನ್ನೆಯ ದಿನದ ಪಾರ್ಟಿಯ ಪ್ರಭಾವವೇ ಇದು. ಅಂತಹ ಪಾರ್ಟಿಗಳಾದ ಮೇಲೆ ಪಿತ್ತಕೋಶಕ್ಕೆ ಹೆಚ್ಚು ತ್ರಾಸು ಆಗುತ್ತೆ. ಪಿತ್ತ ಕೋಶಕ್ಕೆ ಸರಬರಾಜಾಗುವ ನರಗಳೂ, ಹೃದಯಕ್ಕೆ ಸರಬರಾಜಾಗುವ ನರಗಳೂ, ಒಂದೇ ಬೊಂತೆಯಿಂದ ಹರಿಯುತ್ತವೆ. ಹಾಗಾಗಿ, ಕೆಲವು ವೇಳೆ ಪಿತ್ತಕೋಶವು ಕೆರಳಿದಾಗ, ಹೃದಯದಲ್ಲಿದ್ದಂತೆ ನೋವು ಕಾಣಿಸಿಕೊಳ್ಳುತ್ತದೆ. ನಿನ್ನ ನಾಡಿ ಚೆನ್ನಾಗಿದೆ. ಹೃದಯವು ಅಣಿಯಾಗಿದೆ. ಯಾವ ಗಾಬರಿಯೂ ಬೇಡ. ಒಂದು ಹೊತ್ತು ಲಂಘಣ ಮಾಡು. ಕರಿದ ಪದಾರ್ಥಗಳನ್ನು ಒಂದೆರಡು ದಿನ ತಿನ್ನಬೇಡ, ಎಲ್ಲವೂ ಸರಿಹೋಗುತ್ತದೆ' ಎಂದರು.