ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೭೩

'ಬ್ಲಡ್ ಪ್ರೆಷರ್ ರೆಕಾರ್ಡ್ ಮಾಡಿದರಲ್ಲ ! ಎಷ್ಟಿತ್ತು ?' ಎಂದು ಡೈಜೆಸ್ಟ್ ನರಸಪ್ಪ ಕೇಳಿದ.

'ಈಗ ಬ್ಲಡ್ ಪ್ರೆಷರ್ ನೂರಾನಲವತ್ತು ಮತ್ತು ತೊಂಭತ್ತು ಇದೆ'. ಅದೇನೂ ರೋಗಸೂಚಕವಲ್ಲ, ಆದರೂ ನಾಳೆ ಬೆಳಿಗ್ಗೆ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗು' ಎಂದರು, ಡಾಕ್ಟರು. ಅವರಿಗೂ ಊಟಕ್ಕೆ ಹೋಗುವ ಅವಸರ.

ಮನೆಗೆ ಹಿಂತಿರುಗುವಾಗ ನರಸಪ್ಪ ಯೋಚಿಸಿದ, ಡಾಕ್ಟರೇನೋ ಪೂರ್ಣ ಪರೀಕ್ಷೆಮಾಡಿ, ಹೃದಯದ ತಾಪತ್ರಯವಾವುದೂ ಇಲ್ಲ ಎಂದು ಹೇಳಿದರು, ದಿಟ. ಬ್ಲಡ್ ಪ್ರೆಷರ್ ಕೂಡ ನನ್ನ ವಯಸ್ಸಿಗೆ ಸರಿಯಾಗಿದೆ ಎಂದು ಹೇಳಿದರು. ಆದರೆ ನಾಳೆ ಬೆಳಿಗ್ಗೆ ತಿರುಗಿ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗು ಅಂತ ಏಕೆಂದರು ? ಬ್ಲಡ್ ಪ್ರೆಷರ್ ಏನಾದರೂ ಹೆಚ್ಚಾಗಿದ್ದು ; ಇದ್ದುದನ್ನು ಇದ್ದಹಾಗೆ ಹೇಳಿದರೆ ನನಗೆ ಗಾಬರಿಯಾಗಬಹುದು ಅಂತ ಸುಳ್ಳೇನಾದರೂ ಹೇಳಿರಬಹುದೆ? ಈ ಸಂಶಯವು ಹೆಡೆಯೆತ್ತಿತು.

ಹಿಂತಿರುಗುತ್ತಿದ್ದ ರಸ್ತೆಯಲ್ಲಿ ದವಾಖಾನೆಯ ಬೋರ್ಡೊಂದು ಡಿಖಾವಾಗಿ ಕಾಣಿಸಿತು. ದವಾಖಾನೆಯ ಬಾಗಿಲೂ ತೆರೆದಿತ್ತು. ಈ ಡಾಕ್ಟರ ಹತ್ತಿರವೂ ಬ್ಲಡ್ ಪ್ರೆಷರ್ ಪರೀಕ್ಷಿಸೋಣ. ಇವರು ಅಪರಿಚಿತರು. ಇದ್ದುದನ್ನು ಇದ್ದ ಹಾಗೆಯೇ ಹೇಳಬಹುದು ; ಎಂದು ಯೋಚಿಸಿದ. ಅಲ್ಲಿ ಕಾರು ನಿಲ್ಲಿಸಿ ಒಳಕ್ಕೆ ನಡೆದ 'ನನ್ನ ಬ್ಲಡ್‌ಪ್ರೆಷರ್ ಎಷ್ಟಿದೆ ನೋಡಿ. ಡಾಕ್ಟರೇ' ಎಂದು ಕೇಳಿದ. ಕಾರಿನಲ್ಲಿ ಬಂದಿಳಿದ ರೋಗಿಯನ್ನು ಯಾವ ಖಾಸಗಿ ಡಾಕ್ಟರಾಗಲೀ ತೃಪ್ತಿಪಡಿಸಲೇ ಬೇಕು. ಏನು, ಎತ್ತ, ಏಕೆ, ಎಂದು ಕೇಳಬೇಕ್ಯಾಕೆ ? ಬ್ಲಡ್‌ ಪ್ರೆಷರ್ ಪೇಷಂಟರ ಬೇಕು. ರೆಕಾರ್ಡ್ ಮಾಡಿದರೆ ನನ್ನ ಹೊಣೆ ತೀರಿತು, ಎಂದುಕೊಂಡು ಡಾಕ್ಟರು, ಬ್ಲಡ್‌ಪ್ರೆಷರ್ ರೆಕಾರ್ಡ್ ಮಾಡಿದರು. 'ನೂರಾ ಅರವತ್ತು ಮತ್ತು ನೂರು ಇದೆ. ನಿಮ್ಮ ವಯಸ್ಸಿಗೆ ಸರಿಯಾಗೇ ಇದೆ' ಎಂದರು ಡಾಕ್ಟರು. 'ಥ್ಯಾಂಕ್ಯೂ ಡಾಕ್ಟರ್' ಅಂತ ನರಸಪ್ಪ ಹೇಳಿ, ಫೀಜನ್ನಿಟ್ಟು ಕಾರಿಗೆ ಬಂದ. ಕುಳಿತು ಮನೆಯತ್ತ ಹೊರಟ.

'ನಾನಂದುಕೊಂಡಿದ್ದೇ ಸರಿ. ಮನೆ ಡಾಕ್ಟರು ನಿಜ ಸಂಗತಿಯನ್ನು ಮರೆ ಮಾಚಿದ್ದಾರೆ, ನನ್ನ ಹಿತೈಷಿಗಳೇ ಹೌದು. ಆದರೆ ಇದ್ದುದನ್ನು ಇದ್ದ ಹಾಗೆಯೇ ಹೇಳಿ, ಸೂಕ್ತ ಚಿಕಿತ್ಸೆಯನ್ನು ನಡೆಸಿದ್ದರೆ ಚೆನ್ನಾಗಿರುತ್ತಿತ್ತು. 'ಲಂಘಣ ಮಾಡು ; ಜಿಡ್ಡು ತಿನ್ನಬೇಡ, ಅಂತ ಅಡುಗೂಲಜ್ಜಿ ಹೇಳುವಹಾಗೆ ಹೇಳಿದರಲ್ಲ !” ಎಂದಂದು ಕೊಂಡ.