ಮನಮಂಥನ
ಸರಿ ! ಆ ದಿನದಿಂದ ದಿನಕ್ಕೆ ಇಬ್ಬರು ಹೊಸ ಡಾಕ್ಟರುಗಳ ಬಳಿ ಹೋಗಿ ಬ್ಲಡ್ ಪ್ರೆಷರ್ ರೆಕಾರ್ಡ್ ಮಾಡಿಸುವುದಕ್ಕೆ ಆರಂಭಿಸಿದ. ಹಳೆಯ ಹರಕಲು ಬಟ್ಟೆಗಳನ್ನು ಬಡವನಂತೆ ಹಾಕಿಕೊಂಡು, ಛದ್ಮವೇಷಧಾರಿಯಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಬ್ಲಡ್ ಪ್ರೆಷರ್ ರೆಕಾರ್ಡ್ ಮಾಡಿಸಿಕೊಳ್ಳಲು ತೊಡಗಿದ. ಬಡವರ ಹತ್ತಿರ ಡಾಕ್ಟರು ಸುಳ್ಳು ಹೇಳುವುದಿಲ್ಲ. ಅದರಿಂದ ಅವರಿಗೇನೂ ಲಾಭವಿಲ್ಲ ಎಂದೊಂದು ಹುಚ್ಚು ನಂಬಿಕೆ, ನರಸಪ್ಪನಿಗೆ ಒಂದೊಂದು ದಿವಸ ಒಂದೊಂದು ಪ್ರಮಾಣದ ಬ್ಲಡ್ ಪ್ರೆಷರ್.
ಕಳೆದ ಮೂರು ವರ್ಷಗಳಿಂದ ಎದೆಯ ಛಳುಕಾಗಲಿ, ತೋಳು ಮಿಡಿಯುವುದಾಗಲೀ, ಪುನಃ ಆಗಿಲ್ಲ. ಆದರೂ ಒಬ್ಬಿಬ್ಬರ ಹತ್ತಿರ ಹೋಗಿ ಬ್ಲಡ್ಪ್ರೆಷರ್ ಅಳತೆ ಹಾಕಿಸದೇ ಇದ್ದರೆ, ಉಂಡ ಅನ್ನ ಅವನ ಮೈ ಹತ್ತುವಂತಿರಲಿಲ್ಲ. ಬ್ಲಡ್ಪ್ರೆಷರಿನ ಆತಂಕವು ಅವನನ್ನು ದೆವ್ವ ಹಿಡಿದಂತೆ ಹಿಡಿದಿದೆ. ಆದರೆ ಪುಟಾಣಿ ದೆವ್ವ ಅದು. ಕಂಟ್ರಾಕ್ಟ್ ಕೆಲಸವನ್ನು ಸುಸೂತ್ರವಾಗಿ ಮಾಡುತ್ತಿದ್ದಾನೆ. ಸಂಸಾರವನ್ನೂ ಪಗದಸ್ತಾಗಿ ನಡೆಸುತ್ತಿದ್ದಾನೆ. ಆದರೂ ದಪ್ಪ ನೋಟು ಪುಸ್ತಕವೊಂದರಲ್ಲಿ ದಿನದಿನವೂ ಎರಡು ಮೂರು ಬಾರಿ ವ್ಯತ್ಯಾಸವಾಗುತ್ತಿರುವ ಬ್ಲಡ್ ಪ್ರೆಷರ್ ಸಂಖ್ಯೆಗಳನ್ನು ಜಾತಕದ ಕುಂಡಲಿ ಬರೆದ ಹಾಗೆ ಬರೆದಿಡುತ್ತಿದ್ದಾನೆ. ೪೩-೪೪ರ ಪ್ರಾಯದಲ್ಲೇ ಉಯಿಲು ಬರೆದಿಡಲಾರಂಭಿಸಿದ್ದಾನೆ. ತಿಂಗಳು ತಿಂಗಳಿಗೂ ಅದನ್ನು ಬದಲಾಯಿಸುತ್ತಿದ್ದಾನೆ.
ಬಿರಿಯಾನಿ ಬ್ರಾಂದಿ ಪಾರ್ಟಿಗಳಿಗೆ ಸಾಮಾನ್ಯವಾಗಿ ಹೋಗುವುದಿಲ್ಲ. ಅತ್ಯಗತ್ಯವಾಗಿ ಹೋಗಬೇಕಾದಾಗ ಬಹಳ ಎಚ್ಚರದಿಂದ ತುತ್ತಿಗೆ ಮುತ್ತು ಕೊಡುತ್ತಾನೆ. ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನುವುದಿಲ್ಲ. ಬ್ಲಡ್ ಪ್ರೆಷರಿನ ಪುಟಾಣಿ ಆತಂಕವು ಆರೋಗ್ಯಕರ ಜೀವನವನ್ನು ನಡೆಸುವಂತೆ ಅವನನ್ನು ಬೆದರಿಸಿಟ್ಟಿದೆ.
ಆದರೆ ಅವನ ಜೀವನದಲ್ಲಿ, ಬ್ಲಡ್ ಪ್ರೆಷರನ್ನು ಅಳತೆ ಹಾಕಿಸುವ ಚಟ ಕಾಲು ಹಾಕಿಕೊಂಡಿದೆ. ಈ ಚಟವು ಉಲ್ಬಣಗೊಂಡರೆ, ಕೆಲವು ವರ್ಷಗಳಲ್ಲಿ, ಆತಂಕದಿಂದಲೇ ಬ್ಲಡ್ ಪ್ರೆಷರ್ ಹೆಚ್ಚಿ ಬ್ಲಡ್ ಪ್ರೆಷರ್ ರೋಗವು ಕಾಣಿಸಿಕೊಳ್ಳಬಹುದು. ಆದರೆ ಈ ತನಕ ಆರೋಗ್ಯವಾಗಿಯೇ ಇದ್ದಾನೆ.
'ತಿರುಗಿ ನಾಳೆ ಬೆಳಿಗ್ಗೆ ಬಂದು ಬ್ಲಡ್ಪ್ರೆಷರ್ ನೋಡಿಸಿಕೊಂಡು ಹೋಗು' ಎಂದು ಮನೆ ವೈದ್ಯರು ಮೊದಲಸಲ ಹೇಳಿದ್ದು ತಪ್ಪೇ? ಇಲ್ಲವೇ ಇಲ್ಲ. ಆದರೆ ಡಾಕ್ಟರಂದುದು ಆತಂಕಕ್ಕೆ ಅಸ್ತಿಭಾರವನ್ನು ಹಾಕಿತು. ಏಕೆಂದರೆ ಡೈಜೆಸ್ಟ್ ಓದಿದ ಮನಸ್ಸು ಆತಂಕವು ಬೇರೂರಲು ಅಣಿಯಾಗಿತ್ತು. ನರಸಪ್ಪನ ಸಂಶಯ ಪ್ರವೃತ್ತಿಯೂ ಇದಕ್ಕೆ ಬೆಂಬಲ ಕೊಟ್ಟಿತು.