ಮನಮಂಥನ
ಈ ಕಾರಣದಿಂದಾಗಿ, ಕ್ಯಾನ್ಸರಿನ ಮೊದಮೊದಲ ಚಿಹ್ನೆಗಳನ್ನು ಗಮನಿಸಿ ಎಂದು ವೈದ್ಯರು ಡಂಗೂರ ಸಾರುತ್ತಾರೆ.
ದೈನಂದಿನ ಪತ್ರಿಕೆಯಲ್ಲಿ ಸರಳ ಭಾಷೆಯಲ್ಲಿ ಬರೆದಿದ್ದ ಕ್ಯಾನ್ಸರಿನ ಲೇಖನವೊಂದನ್ನು ಕಪಿನೀಪತಿ ಓದಿದ. ದೊಡ್ಡ ಅಧಿಕಾರದಲ್ಲಿ ಯಶಸ್ವಿಯಾಗಿ ಮೆರೆಯುತ್ತಿದ್ದ ಅವನಿಗೆ ಪುಸ್ತಕಗಳು, ಪತ್ರಿಕೆಗಳು, ಓದು ಎಂದರೆ ತುಂಬಾ ಇಷ್ಟ. ಸಾಮಾನ್ಯವಾಗಿ ದೊಡ್ಡ ಅಧಿಕಾರಕ್ಕೆ ಬಂದು ಮುಟ್ಟಿದವರು, ಆಸ್ತಿಪಾಸ್ತಿ, ಇನ್ಕ್ರಿಮೆಂಟ್,ಪ್ರಮೋಷನ್, ತಮ್ಮ ಕೆಲಸ, ಇವು ಹೊರತು ಇತರ ವಿಷಯಗಳಿಗೆ ಗಮನ ಕೊಡುವುದಿಲ್ಲ. ಆದರೆ ಕಪಿನೀಪತಿ ಈ ನಿಯಮಕ್ಕೆ ಹೊರತು, ಜ್ಞಾನಾರ್ಜನೆಗಾಗಿ ಓದುವುದು ಎಂದರೆ ಬಲು ಖಯಾಲಿ.
'ಗಂಟಲಿನಲ್ಲಿ ಏನೋಸಿಕ್ಕಿಹಾಕಿಕೊಂಡಹಾಗಿದೆ, ಸ್ವಲ್ಪ ಪರೀಕ್ಷೆಮಾಡಿ ನೋಡಿ' ಎಂದವ ಗಂಟಲುತಜ್ಞರ ಬಳಿಗೆ ಹೋದ. ಐವತ್ತರ ಪ್ರಾಯವನ್ನು ಮೀರಿದ ರೋಗಿಗೆ ಕ್ಯಾನ್ಸರ್ ಇರಬಹುದೇ ಎಂಬ ಅನುಮಾನವು ವೈದ್ಯರಿಗೆ ಯಾವಾಗಲೂ ಇದ್ದೇ ಇರುತ್ತದೆ. ಆ ಕಾರಣದಿಂದ ವೈದ್ಯರು ಕಪಿನೀಪತಿಯ ಗಂಟಲನ್ನು ಬಹಳ ಎಚ್ಚರದಿಂದ ಅವಸರಪಡದೆ ಪರೀಕ್ಷಿಸಿದರು. ಕ್ಯಾನ್ಸರಿನ ಯಾವ ಕಿಂಚಿತ್ ಸೂಚನೆಯೂ ಕಾಣಿಸಲಿಲ್ಲ. 'ಸಿಗರೇಟ್ ಸೇದುವುದನ್ನು ಬಿಟ್ಟು ಬಿಡು, ಸಿಕ್ಕಿಹಾಕಿಕೊಂಡಂತಾಗುವುದು ನಿರ್ಮೂಲವಾಗುತ್ತದೆ. ಕ್ಯಾನ್ಸರಿನ ಭಯಕ್ಕೆ ಕಾರಣವೇ ಇಲ್ಲ' ಎಂದು ಖಡಾಖಂಡಿತವಾಗಿ ಡಾಕ್ಟರು ಹೇಳಿದರು. ಕಪಿನೀಪತಿಗೆ ಸಂತೋಷವಾಯಿತು. ಥ್ಯಾಂಕ್ಯೂ ಮಾಡಿ ಮನೆಗೆ ಹಿಂತಿರುಗಿದ, ಮೂರು ಸಿಗರೇಟುಗಳಿದ್ದ ಪ್ಯಾಕೆಟ್ಟನ್ನು ಮೋಟಾರಿನ ಕಿಟಕಿಯಿಂದ ರಸ್ತೆಗೆ ಎಸೆದ. ಇನ್ನು ಮುಂದೆ ಸಿಗರೇಟ್ ವರ್ಜ್ಯ ಎಂದು ತನಗೆ ತಾನೇ ಕೇಳಿಸುವಂತೆ ಶಪಥವನ್ನು ಮಾಡಿದ. ಸುಮಾರು ಒಂದು ತಿಂಗಳು ಹೊಗೆ ಬತ್ತಿಯನ್ನು ಹಿಡಿಯಲೇ ಇಲ್ಲ. ಆದರೂ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆಯೇ ಇತ್ತು. 'ಗಂಟಲ ತಜ್ಞರು ಪ್ರವೀಣರೇನೋ ಹೌದು ! ಆದರೆ ಎಂತಹವರೂ ಒಮ್ಮೊಮ್ಮೆ ಎಡವಬಹುದಲ್ಲ ! ಎಡವಿದರೆ, ಅವರು ಎದ್ದು ಚೇತರಿಸಿಕೊಳ್ಳುತ್ತಾರೆ. ನನ್ನ ಪಾಡು ! ಹೇಗೂ ಒಂದು ತಲೆಗಿಂತ ಎರಡು ತಲೆ ಕ್ಷೇಮ' ಎಂದು ಯೋಚಿಸಿ ಬೊಂಬಾಯಿಗೆ ಹೋದಾಗ, ತಜ್ಞರ ಸಲಹೆಯನ್ನು ಪಡೆಯಹೋದ. ಸ್ವಭಾವತಃ ಜಾಣ, ಮೊದಲ ತಜ್ಞರು ಬರೆದುಕೊಟ್ಟಿದ್ದುದನ್ನೂ ನಡೆಸಿದ ಪರೀಕ್ಷೆಯ ವಿವರಗಳನ್ನೂ, ಲಕ್ಷಣವಾಗಿ ತಿಳಿಸಿದ. ಬೊಂಬಾಯಿನ ತಜ್ಞರೂ ಎಲ್ಲ ಸಾಮಾನ್ಯ ಪರೀಕ್ಷೆಗಳನ್ನು ಮಾಡಿದರು. ಕ್ಯಾನ್ಸರಿನ ಸೂಚನೆ ಯಾವುದೂ ಕಂಡುಬರಲಿಲ್ಲ.