೭೭
ಆಗ ಕಪಿನೀಪತಿಯು ಒಂದು ಸಲಹೆ ಮಾಡಿದ 'ಒಂದು ಚೂರು ಸೆಕ್ಷನ್ ಮಾಡಿ ಪರೀಕ್ಷೆ ಮಾಡಿದರೆ ಹೇಗೆ ?' ಎಂದು. ಪತ್ರಿಕೆಗಳನ್ನು ಓದುವವನಲ್ಲವೇ? ಕ್ಯಾನ್ಸರಿಗೆ ಮಾಡುವ ಸಕಲ ಪರೀಕ್ಷಾ ವೈಭವಗಳನ್ನು ಅರಿತಿದ್ದ. ಅದನ್ನೂ ಮಾಡುತ್ತೇನೆ, ನಿಮ್ಮ ಸಂಶಯವಾದರೂ ಆಗ ನಿವಾರಣೆಯಾಗುತ್ತೆ ! ಇನ್ನು ಯಾವ ಫಲವಿರದಿದ್ದರೂ' ಎಂದರು ಆ ತಜ್ಞರು. ಪುಟ್ಟದೊಂದು ಶಸ್ತ್ರ ಚಿಕಿತ್ಸೆ ಮಾಡಿ ಸೆಕ್ಷನ್ ತೆಗೆದರು. ವಾರವಾದ ಮೇಲೆ ಅದರ ಫಲಿತಾಂಶವನ್ನು ಕಪಿನೀಪತಿಗೆ ಕಳಿಸಿಕೊಟ್ಟರು. 'ಕ್ಯಾನ್ಸರಿನ ಸುಳಿವೂ ಇಲ್ಲ' ಎಂದಿತ್ತು ಫಲಿತಾಂಶದ ವರದಿಯಲ್ಲಿ. ಅದನ್ನು ತಂದು ಮನೆ ವೈದ್ಯನಿಗೆ ತೋರಿಸಿದ.
'ನೋಡಪ್ಪ ! ಬೊಂಬಾಯಿನ ತಜ್ಞರೂ, ಕ್ಯಾನ್ಸರಿನ ಸುಳಿವಿಲ್ಲ ಎಂದು ಬರೆದಿದ್ದಾರೆ. ಆದರೆ ನನ್ನ ಗೋಳು ತಪ್ಪೇ ಇಲ್ಲ. ನಿಮ್ಮಗಳ ಮಾತು ಕೇಳಿ ಸಿಗರೇಟನ್ನೂ ಬಿಟ್ಟೆ. ಆದರೆ ಆ ಕಾಟ ನನ್ನ ಬಿಡಲಿಲ್ಲ. ತಜ್ಞರದೆಲ್ಲಾ ಆಯಿತು. ನಿನ್ನ ಕೈಲಿ ಏನಾದರೂ ಸಾಧ್ಯವೇ ನೋಡು' ಎಂದು ಹೇಳಿದ. ಕಪಿನೀಪತಿಯ ಸಂಸಾರದ ವಿವರಗಳೆಲ್ಲವೂ ಮನೆ ವೈದ್ಯನಿಗೆ ಗೊತ್ತಿತ್ತು. ಆದಕಾರಣ ಅವ ಅಂದ: 'ರಾಯರೇ ! ನಿಮ್ಮ ಗಂಟಲಿನಲ್ಲಿ ಯಾವ ಬೇನೆಯೂ ಇಲ್ಲೆಂದು ತಜ್ಞರೆಲ್ಲರೂ ಹೇಳಿದ್ದಾರೆ. ಆದರೂ ನಿಮ್ಮ ತಾಪತ್ರಯ ತಪ್ಪಿಲ್ಲ. ನನಗನ್ನಿಸುತ್ತೆ, ಅಮೆರಿಕಾಕ್ಕೆ ಹೋದ ನಿಮ್ಮ ಮಗ ಹಿಂತಿರುಗುವ ತನಕ ಇದು ಹೀಗೇ ಇರುತ್ತೆ ಅಂತ. ಅಮೆರಿಕಾದ ಹುಡುಗಿಯೊಬ್ಬಳೊಂದಿಗೆ ತುಂಬಾ ಓಡಾಡುತ್ತಿದ್ದಾನೆ ಎಂದು ಗಾಳಿ ಸಮಾಚಾರ ಬಂದಾಗಿನಿಂದ ಹೀಗೆ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದೆ ಅಂತ ಅನ್ನುತ್ತಿದ್ದೀರಿ.' ಎಂದ. ಕಪಿನೀಪತಿ ಗಹಗಹಿಸಿ ನಕ್ಕ. 'ಅಲ್ಲ, ಡಾಕ್ಟರೇ ! ನವರಾತ್ರಿಗೆ ಇಡುವ ಪಟ್ಟದ ಬೊಂಬೆಯ ಬಣ್ಣವಿರುವ ಹುಡುಗಿಯನ್ನು ನಾನೇನೋ ಮದುವೆಯಾದೆ. ನನ್ನ ಮಗ ಜಂತದ ಬೊಂಬೆಯಂತಹವಳನ್ನು ಮದುವೆಯಾದರೆ ನನಗೆ ಸಂತೋಷವೇ ಆಗಬೇಕು. ಅದಕ್ಕೂ, ನನ್ನ ಗಂಟಲಿಗೂ ಏಕೆ ಗಂಟು ಹಾಕುತ್ತೀರಿ ?' ಎಂದ. “ಆತಂಕದಿಂದಲೂ ಈ ತರಹ ಕಾಟವು ಗಂಟಲಿನಲ್ಲಿ ಕಾಣಿಸಲು ಸಾಧ್ಯ. ಬೇರೆ ಯಾವ ಕಾರಣವೂ ಸಿಗದುದರಿಂದ, ಆತಂಕವು ಯಾವುದಿರಬಹುದು ಎಂದು ಯೋಚಿಸಿದೆ. ನಿಮ್ಮ ಮಗನ ನೆನಪಾಯಿತು. ಗಾಳಿ ಸಮಾಚಾರವು ನನಗೂ ಕೇಳಿಸಿತ್ತು. ಅದಕ್ಕೇ ತಾಳೆ ಹಾಕಿದೆ' ಎಂದರು ಮನೆ ವೈದ್ಯರು. 'ನೀನೋ ಹಳೇ ಕಾಲದ ಗೊಡ್ಡು ಡಾಕ್ಟರು' ಎಂದು ಕಪಿನೀಪತಿ ಆದರದಿಂದ ಮೂದಲಿಸಿದ.
ಮೂರು ತಿಂಗಳಾದ ಮೇಲೆ ಒಂದು ದಿನ ಕಪಿನೀಪತಿಯು ಮನೆ