ಮನಮಂಥನ
ವೈದ್ಯರನ್ನು ಬರಹೇಳಿದ. 'ಬದರಿ ಯಾತ್ರೆಯನ್ನು ಮಾಡಿಬಿಡುವ ಎಂದು ಮನಸ್ಸಾಗಿದೆ. ಸಿಮ್ಲಾದಲ್ಲಿ ಒಂದು ಸಭೆಗೆ ನನ್ನ ಕಳಿಸಿದ್ದಾರೆ. ಜತೆಯಲ್ಲಿ ಬರುವ ಇಬ್ಬರು ಮೂವರು ಅಧಿಕಾರಿಗಳು ಬದರಿಯಾತ್ರೆಯ ಏರ್ಪಾಡು ಮಾಡಿದ್ದಾರೆ. ಅವರ ಜತೆಗೆ ಹೋದರೆ ಶ್ರಮವಿಲ್ಲದೆ ಯಾತ್ರೆಯಾಗಿಬಿಡುತ್ತೆ. ನನ್ನ ದೇಹಸ್ಥಿತಿ ನಿನಗೆ ಗೊತ್ತು. ಆ ಛಳಿ ಗಾಳಿಯಲ್ಲಿ ನೆಗಡಿ ಶೀತ ಆದರೆ ಯಾವ ಔಷಧಿಗಳನ್ನು ತೆಗೆದುಕೊಳ್ಳಬೇಕು. ಏನು ಪಥ್ಯ ಮಾಡಬೇಕು. ಇವೆಲ್ಲವನ್ನೂ ವಿಶದವಾಗಿ ಬರೆದು, ಕೈಗಾವಲಿಗೆಂದು ಔಷಧಿಗಳನ್ನೂ ಇಟ್ಟು, ಒಂದು ಪ್ಯಾಕೆಟ್ ಕೊಡು. ಮೂರು ನಾಲ್ಕು ವಾರಗಳ ಪ್ರವಾಸ, ಅನುಕೂಲಗಳು ದೊರೆತಾಗ ಯಾಕೆ ಬಿಡಬೇಕು?' ಎಂದರು. ಗಂಟಲಿನ ವಿಷಯ ಅವರೂ ಎತ್ತಲಿಲ್ಲ. ಮನೆ ವೈದ್ಯರು ಜ್ಞಾಪಿಸಲೂ ಇಲ್ಲ. ಅಗತ್ಯವಾದ ಔಷಧಿಗಳನ್ನು ಸಣ್ಣ ಮಡೀ ಪೆಟ್ಟಿಗೆಯಲ್ಲಿಟ್ಟು ಕಪಿನೀಪತಿಗೆ ಕಳಿಸಿಕೊಟ್ಟರು.
ನಾಲ್ಕು ವಾರಗಳಾದ ಮೇಲೆ ಕಪಿನೀಪತಿಯು ಕಾನ್ಸರೆನ್ನನ್ನೂ ಯಾತ್ರೆಯನ್ನೂ ಮುಗಿಸಿಕೊಂಡು ಬಂದ, ಮನೆಯಲ್ಲಿ ಗಂಗಾ ಸಂತರ್ಪಣೆಯನ್ನು ಮಾಡಿದ. ಮನೇ ಡಾಕ್ಟರು ಹೊತ್ತಾಗಿ ಬಂದುದರಿಂದ, ಕಪಿನೀಪತಿಯ ಜತೆಗೆ ಮೂರನೇ ಪಣಿಯಲ್ಲಿ ಭೋಜನಕ್ಕೆ ಕುಳಿತರು, 'ರಾಯರೇ ! ಯಾತ್ರೆಗೆ ಅಂತ ನಿಮ್ಮ ಜೇಬಿನ ಪೈಸೆ ಪೋಲಾಗದೆ ಇದ್ದರೂ, ಈ ಸಂತರ್ಪಣೆಗಾದರೂ ಧಾರಾಳವಾಗಿ ಖರ್ಚು ಮಾಡಿದ್ದೀರಿ. ಏನೇನೆಲ್ಲಾ ಭಕ್ಷ್ಯಗಳು ; ಭೋಜ್ಯಗಳು' ಎಂದರು ಮನೆ ಡಾಕ್ಟರು, ಸ್ವಾಭಾವಿಕವಾಗಿ ಅವರು ಉಂಡಾಡಿಭಟ್ಟರು.
'ಯಾತ್ರೆ ಮುಗಿಸಿಕೊಂಡು ಬರುವ ಹೊತ್ತಿಗೆ ಅಮೆರಿಕಾದಿಂದ ಕೇಬಲ್ ಬಂದಿತ್ತು. ಇನ್ನೊಂದು ವಾರದಲ್ಲಿ ಮಗ ಯೂರೋಪಿನ ಪ್ರವಾಸಕ್ಕೆ ಹೋಗ್ತಾನಂತೆ. ಒಂದೆರಡು ತಿಂಗಳು ಅಲ್ಲೆಲ್ಲಾ ಸುತ್ತಾಡಿಕೊಂಡು, ಊರಿಗೆ ಹಿಂತಿರುಗುತ್ತಾನಂತೆ. ಕಾಗದವೂ ಬಂತು. ಪಿಎಚ್.ಡಿ.ಯಲ್ಲಿ ಯಶಸ್ವಿಯಾಗಿ ಪಾಸು ಮಾಡಿದ್ದಾನಂತೆ. ಸುಮಾರು ಉದ್ದಾನೆ ಕಾಗದ. ಅವನ ಪ್ರೊಫೆಸರುಗಳು ಹೊಗಳಿದ್ದನ್ನೆಲ್ಲಾ ಬರೆದಿದ್ದಾನೆ' ಎಂದರು ಕಪಿನೀಪತಿ, ಮನೆ ಡಾಕ್ಟರು ಆಡಿದ ಚುಚ್ಚು ಮಾತು ತಾಕಿರಲೇ ಇಲ್ಲ.
'ಹಾಗೇ ! ಅಂದರೆ ಕಾಗದದಲ್ಲಿ, ಅಮೆರಿಕಾದ ಜಂತದ ಬೊಂಬೆ, ಮದುವೆ, ಮಾಂಗಲ್ಯ, ಇತ್ಯಾದಿ ?' ಎಂದು ಡಾಕ್ಟರು ಕೇಳಿದರು.
'ಅದರ ಸುದ್ದಿಯೇ ಇಲ್ಲ. ಬರೀ ಗಾಳಿ ಸಮಾಚಾರ ಅಂತ ಕಾಣುತ್ತೆ. ನಮ್ಮ ಜನದ ಚಾಳೀ ಗೊತ್ತಲ್ಲಾ, ಯಾವ ಚಾಡಿ ಸುದ್ದಿಗೂ ರೆಕ್ಕೆ ಪುಕ್ಕ ಕಟ್ಟಿ ಬಿಡೋದು' ಎಂದು ರಾಯರು ಆರಾಮವಾಗಿ ನಕ್ಕರು.