ಪುಟ:ಮಿಂಚು.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

99

"ಐ.ಸಿ.ಎಸ್.ನವನಿಗೆ ಪೋನ್ ಮಾಡಿದಿಯಾ?"
"ಬೆಳಗ್ಗೇನೆ ಮಾಡ್ದೆ."
"ಫೈನ್."
"ನೀವಲ್ಲವೆ ನನ್ನ ಗುರು? ನಿಮ್ಮ ಗುಣದ ಸ್ವಲ್ಪ ಅಂಶವಾದರೂ ಶಿಷ್ಯೆಯಲ್ಲಿ
ಇರಬೇಡವೆ?"
"ಇವತ್ತು ಸಂಜೆ ಪ್ರಧಾನಿಯವರನ್ನ ಕಾಣ್ತೇನೆ."
"ನಾನು ಬಂದಿರೋ ವಿಷಯ__"
ಹೇಳ್ತೇನೆ, ಪಕ್ಷದ ನಿಧಿಗೆ ನಿನ್ನ ರಾಜ್ಯದ ವಂತಿಗೆ ಎಷ್ಟು ಅನ್ನೋದನ್ನ
ನೀನು ವಾಪಸಾಗೋದಕ್ಕೆ ಮುಂಚೆ ತಿಳಿಸ್ತೀನಿ."
ನಕುಲದೇವನೂ ಸೌದಾಮಿನಿಯೂ ಮುಂದುಗಡೆಯ ಕೊಠಡಿಗೆ ಬಂದಿದ್ದರು.
ಆ ತನಕ ತಡೆಹಿಡಿದಿದ್ದ ಪೋನ್ ಕರೆಗಳು ಒಂದಾದ ಮೇಲೊಂದು ಬಂದುವು.
"ನೀವು ದುಡಿಯೋದನ್ನು ನೋಡೋದೇ ಒಂದು ಮಹಾನ್ ಅನುಭವ."
"ನಾಳೆ ಸಂಪಾದಕರ ಜತೆ ಯಾವ ಭಾಷೇಲಿ ಮಾತಾಡ್ತೀಯಾ?"
"ಇಂಗ್ಲೀಷಾದರೆ ಇಂಗ್ಲೀಷು. ಹಿಂದೂಸ್ಥಾನಿಯಾದರೆ ಹಿಂದೂಸ್ಥಾನಿ."
"ಹತ್ತು ಜನ ಸಂಪಾದಕರನ್ನು ಕರೆಯೋದಕ್ಕೆ ಹೇಳಿದೇನೆ. (ಮೇಜಿನ
ಮೇಲೆ ಅತ್ತಿತ್ತ ಹುಡುಕಿ)ತಗೋ ಪಟ್ಟಿ.ನಿನ್ನ ಕುಟೀರದ ಮನುಷ್ಯನೂ ನಾಳೆ ಬೆಳಗ್ಗೆ
ಅವರಿಗೆ ಪೋನ್ ಮಾಡಲಿ."
ಅಧ್ಯಕ್ಷರು ಬಂದಿದಾರೆ-ಎಂದು ಇಂಟರ್ ಕಾಮ್ ತಿಳಿಸಿತು. ನಕುಲದೇವ್
ಅವರೊಡನೆ ಮಾತನಾಡಿದ. "ಸೌದಾಮಿನಿ ಬಹೆನ್ ಭೇಟಿಗೆ ಬರ್ತಿದ್ದಾರೆ" ಎಂದ.
"ಯಾರಾದರೂ ಹೋಗಿ ಹಾಳು ಹರಟೆಗೆ ಕೂತ್ಕೊಳ್ಳೋದಕ್ಕೆ ಮೊದಲೇ
ನೀನು ಅವರ ಮುಂದೆ ಪದ್ಮಾಸನ ಹಾಕು" ಎಂದು ನುಡಿದು ಸೌದಾಮಿನಿಯನ್ನು
ಎಬ್ಬಿಸಿದ.
"ಚೌಗುಲೆಗೆ ಕಾಗದ?"
"ಬೆಳಗ್ಗೆ ನೀನೇ ಕೊಡು."
"ಈ ಗಲಾಟೇಲಿ ನಿಮ್ಮನ್ನು ಇವತ್ತು ಪುನಃ ನೋಡೋದಕ್ಕೆ ಆಗುತ್ತೊ
ಇಲ್ಲವೊ?"
"ರಾತ್ರೆ ಕುಟೀರಕ್ಕೆ ಪೋನ್ ಮಾಡ್ತೇನೆ."
"ನಿನ್ನೆಯ ಅಯಾಸ ಪೂರ್ತಿ ಪರಿಹಾರವಾಗಿಲ್ಲ. ಇವತ್ತು ಬೇಗನೆ
ಮಲಕೊಳ್ತೇನೆ,"
ನಕುಲದೇವ್ ಪರೀಕ್ಷಕ ನೋಟದಿಂದ ಸೌದಾಮಿನಿಯ ಕಣ್ಣುಗಳನ್ನು ನೋಡಿದ,
ಆ ಕ್ಷಣದಲ್ಲಿ ಅವು ಮುಚ್ಚಿದ್ದುವು.
ಹೊರಗೆ ಬಂದ ಸೌದಾಮಿನಿ ಕಿಕ್ಕಿರಿದು ನೆರೆದಿದ್ದ ಜನರನ್ನು ಕಂಡಳು.