ಪುಟ:ಮಿಂಚು.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

101

"ತಮ್ಮ ಪ್ರವಚನ ಕೇಳ್ತಾ ಇದ್ದರೆ. ಅಧಿಕಾರ ತ್ಯಜಿಸಿ ಇಲ್ಲಿಗೇ ಬಂದು
ಬಿಡೋಣ ಅನಿಸ್ತದೆ."
"ಜನ ಹಿತವೇ ಪಕ್ಷದ ಹಿತ. ಪಕ್ಷಕ್ಕೆ ಒಳ್ಳೆಯದಾಗಲೀಂತ ನಿನ್ನನ್ನು ಅಲ್ಲಿಗೆ
ಕಳಿಸಿದೆವು. ಅಧಿಕಾರ ಸೂತ್ರ ನಿನ್ನ ಕೈಗೆ ಬಂತು. ಈಗ ಪಕ್ಷದ ಹಿತ ಜನಹಿತ
ಎರಡನ್ನೂ ನೀನು ಸಾಧಿಸಬೇಕು."
ಸೌದಾಮಿನಿಗೆ ಅನಿಸಿತು. ಈ ವಿಚಾರ ಸರಳವಲ್ಲ; ಗಾಢ, ಗೂಢ. ಜಗ
ದಲಪುರದ ಬಾಬಾಜಿಯ ಪ್ರಸ್ತಾಪ ಬಂದಿರಲಿಲ್ಲ. ಬಾಬಾಗೆ ಈ ಅಧ್ಯಕ್ಷನೂ ಬೇಕು
ಮಹಾ ಕಾರ್ಯದರ್ಶಿಯೂ ಬೇಕು. ಬಾಲ್ಯದಲ್ಲಿ ಕಲಿತಿದ್ದ ಒಂದು ಹಾಡಿನ ಸಾಲು
ನೆನಪಾಯಿತು: 'ಯಾರಿಗೆ ಯಾರುಂಟು ಅರಿವಿನ ಸಂಸಾರ ?' ಜತೆಯಲ್ಲೆ ಸ್ವರ
ಪಡೆಯಲು ಚಡಪಡಿಸಿತು: 'ಯಾರು ಹಿತವರು ನಿನಗೆ ಈ ಮೂವರೊಳಗೆ?'
ಮುಖ್ಯಮಂತ್ರಿಯ ಒಳದನಿ ನುಡಿಯಿತು: ಪ್ರಧಾನಿಯನ್ನೂ ಸೇರಿಸಿದರೆ 'ಈ
ನಾಲ್ವರೊಳಗೆ' ಆಗ್ತದೆ ಏನೇ ಇರಲಿ ; ಮಹದಾಸೆಯ ಕಡಲಿಗೆ ತನ್ನನ್ನು ತೇಲಿ
ಬಿಟ್ಟವರು ಧರ್ಮೇಂದರ್ ಬಾಬಾ. ಅವರಿಗೆ ತನ್ನ ನಿಷ್ಠೆ ಅಚಲ.
ಅವಳ ಮೌನ ಅಧ್ಯಕ್ಷರಿಗೆ ಇಷ್ಟವಾಯಿತು.
"ಕಿಷ್ಕಿಂಧೆಯಲ್ಲಿ ಮದ್ಯಪಾನ ನಿಷಿದ್ಧ ಅಲ್ಲವೆ ?'
"ಈಗ ನಿಷಿದ್ಧ. ಆದರೆ ಇನ್ನು ಎಷ್ಟು ಕಾಲ ಹೀಗಿರುತ್ತೋ ಹೇಳಲಾರೆ.
ನೆರೆಯ ಎರಡು ರಾಜ್ಯಗಳಲ್ಲಿ ಹೆಂಡ ಹರೀತಿರೋದರಿಂದ.."
"ನನಗೆ ಗೊತ್ತು. ನಮ್ಮ ಭೂಮಿಯಲ್ಲಿ ಇದು ಹಲವು ಸಹಸ್ರ ವರ್ಷ
ಹಳೆಯ ಚಾಳಿ, ನಮ್ಮ ಪೂರ್ವಜರು ಕುಡೀತಿದ್ದ ಸೋಮರಸ ಏನು ಅಂದ್ಕೊಂಡೆ?
ಯಜ್ಞ ಯಾಗಾದಿಗಳಲ್ಲಿ ದೇವ ದೇವತೆಗಳಿಗೂ ಸೋಮರಸ ಅರ್ಪಿಸ್ತಿದ್ದರು. ನಾವು
ಹೋಗ್ತಿರೋದು ಮುಂದಕ್ಕೊ ಹಿಂದಕ್ಕೊ ಗೊತ್ತಾಗ್ತಿಲ್ಲ."
ಇಂಟರ್ ಕಾಮ್ ಬಸ್ ಮಾಡಿತು.
"ಚಾಚಾಜಿ. ಚೌಧುರಿ ಸಾಹೆಬ್ ಬಂದಿದ್ದಾರೆ. ಕಳಿಸ್ಲಾ ?"
"ಹ್ಞ."
"ಅಧ್ಯಕ್ಷರೆಂದರು :
"ಸರಿ, ಬೇಟಿ. ಮುಂದಿನ ಸಲ ನೀನು ದಿಲ್ಲಿಗೆ ಬಂದಾಗ ಭೇಟಿಯಾಗೋಣ.
ಯಾವತ್ತಾದರೊಮ್ಮೆ ನಾನೇ ಕಿಷ್ಕಿಂಧೆಗೆ ಬಂದರೂ ಬಂದೆ."
"ಆ ದಿವಸ ನನ್ನ ಜೀವನದ ಮಹಾ ಸುದಿನವಾಗ್ತದೆ."
ನಮಸ್ಕರಿಸುತ್ತ ಅವಳೆದ್ದು ಹೊರಟಳು. ಚೌಧುರಿ ಬರುತ್ತಿದ್ದ. ಕುತೂ
ಹಲದಿಂದ ನೋಡಿದ. ಆಕೆ ಯಾರು ಎಂಬುದನ್ನು ನಕುಲದೇವ್ ಆಗಲೆ ಹೇಳಿದ್ದ.
ಹೋಗುವ ಗಂಟೇನು ?
"ನಮಸ್ತೆ" ಎಂದ.