ಪುಟ:ಮಿಂಚು.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

102

ಮಿಂಚು

ಮುಗುಳುನಗುತ್ತ ವಂದನೆ ಸ್ವೀಕರಿಸಿ, 'ಯಾರೋ ಉತ್ತರಪ್ರದೇಶದವನಿರ
ಬೇಕು' ಎಂದುಕೊಳ್ಳುತ್ತ. ಸೌದಾಮಿನಿ ಮುಂದಕ್ಕೆ ಹೆಜ್ಜೆ ಇಟ್ಟಳು. ಕುಳಿತೋ
ನಿಂತೋ ತಮ್ಮ ಸರದಿ ಕಾಯುತ್ತಿದ್ದವರು ಇನ್ನೂ ಇದ್ದರು, ಅವರೆಡೆಯಿಂದ
ಪರಶುರಾಮ ಎದ್ದು ಬಂದು ಬ್ರೀಫ್ ಕೇಸ್ ಪಡೆದುಕೊಂಡ.
ಕೆಳಗೆ ದ್ವಾರಪಾಲಕ "ಸೆಲ್ಯೂಟ್, ಮಾತಾಜಿ," ಎಂದ. ಸೌದಾಮಿನಿಯ
ಮನಸ್ಸಿನಲ್ಲಿ 'ಜಾಣ ಮುದಿಯ' ಎಂಬ ಮೆಚ್ಚುಗೆಯ ಪದ ರೂಪುಗೊಂಡಿತು.
ಟ್ಯಾಕ್ಸಿಯವನಿಗೆ ಆಕೆ ಅಂದಳು :
"ಕನ್ನಾಟ್ ಪ್ಲೇಸಿಗೆ ಹೋಗು."
ಕೈಯಲ್ಲಿ ಕಾಸಿಲ್ಲದಿರುತ್ತಿದ್ದ ಹಳೆಯ ದಿನಗಳಲ್ಲೂ ಆ ಸ್ಥಳ ಸೌದಾಮಿನಿಗೆ
ಇಷ್ಟವಾಗಿತ್ತು.
ಪರಶುರಾಮ ಬೆರಗುಗಣ್ಣಿನಿಂದ ದಿಲ್ಲಿ ವೈಭವದ ತುಣುಕನ್ನು ನೋಡಿದ.
ಸಂಜೆಯಾಗುತ್ತಿದ್ದಂತೆ ಟ್ಯಾಕ್ಸಿ ಕುಟೀರದ ಮುಂದೆ ನಿಂತಿತು. ಮಾನ್ಯ
ಪ್ರವಾಸಿ ಒಳ ಹೋದೊಡನೆ ಫೆರ್ನಾಂಡೀಸ್ ಬಂದು ಎಷ್ಟನ್ನೋ ಬರೆಸಿದ.
ಎಷ್ಟನ್ನೋ ಕೊಟ್ಟ. ವೃತ್ತಿ ಬಾಂಧವನ ಆ ಚಟುವಟಿಕೆಯಲ್ಲಿ ಪರಶುರಾಮ ತಲೆ
ಹಾಕಲಿಲ್ಲ. ಫೆರ್ನಾಂಡೀಸ್ ಕಾಣಿಸಿದೊಡನೆ ಆತನಿಗೆ ಹೇಳಿ, ಸ್ನಾನದ ಮನೆ ಸೇರಿದ.
"ಈಗಲೇ ಹೀಗೆ. ಕಡು ಬೇಸಗೆಯಲ್ಲಿ ಇಲ್ಲಿ ಜನ ಬೆಂದು ಹೋಗೋದೇ ಖಚಿತ,"
ಎಂದುಕೊಳ್ಳುತ್ತ.
***
ಪರಶುರಾಮ ಮೈಯಿಂದ ಇದ್ದ ಮತ್ತು ಇಲ್ಲದ ಕೊಳೆ ತೊಳೆಯುತ್ತಿದ್ದಂತೆ
ಸೌದಾಮಿನಿ ಸ್ವಲ್ಪ ಅಡ್ಡಾದಳು. ಪಾದಗಳು ಜುಮು ಜುಮು ಎಂದುವು. ಕೆನ್ನೆಯ
ಒಂದು ಬದಿ ಟಿಪಟಿಪನೆ ಸಿಡಿಯ ತೊಡಗಿತು. ಚಿಂತೆ ಅಡರಿತು. ಯಾಕೆ ಹೀಗೆ ?
ಯಾರಾದರೂ ಡಾಕ್ಟರನ್ನು ಕರೆಸೋಣವೆ ? ಇಲ್ಲಿರುವವರು ಮಾತಾಡಿಕೊಳ್ಳುತ್ತಾರೆ.
ವೈದ್ಯ ಪರೀಕ್ಷೆಗೆ ಸೌದಾಮಿನಿ ಒಳಗಾಗುವುದೆಂದರೇನು ? ತನ್ನ ಆರಾಧಕರು
ವ್ಯಥಿತರಾಗಬಹುದು. ಆದರೆ ತನ್ನನ್ನು ಇಷ್ಟಪಡದವರು ? ಸುದ್ದಿಗೆ ಉಪ್ಪು
ಖಾರ ಹಚ್ಚಬಹುದು.
'ಬಾಬಾಜಿ' 'ಬಾಬಾಜಿ' ಎಂದು ಸಣ್ಣನೆ ನರಳಿದಳು. ಅವರೆಂದಿದ್ದರು :
"ಕಾಮನೆಗಳನ್ನು ಹತೋಟಿಯಲ್ಲಿಟ್ಟುಕೋ. ಇಲ್ಲದೆ ಹೋದರೆ, ಈ ವರ್ಷ ಇಲ್ಲಿ
ನೀನು ಗಳಿಸಿದ್ದೆಲ್ಲ ವ್ಯರ್ಥವಾಗ್ತದೆ." ಬಹಳ ದಿನ ಆ ಎಚ್ಚರಿಕೆಯನ್ನು ತಾನು
ಮರೆತಿರಲಿಲ್ಲ. ಆದರೆ, ಕ್ರಮೇಣ ? ಬಾಬಾಜಿ ತನಗೆ ಹೆದ್ದಾರಿ ಹಾಕಿ ಕೊಟ್ಟರು.
ಆದರೆ ತಾನು ?