ಪುಟ:ಮಿಂಚು.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

122

ಮಿಂಚು

ನೆನಪಿಟ್ಕೊಳ್ಳಿ, ನಿಮಗೆ ಮುಖ್ಯಮಂತ್ರಿ ಹ್ಯಾಗೆ ಗೊತ್ತೂಂತ ಯಾರಾದರೂ ಕೇಳಿ
ದರೆ, ತಲೆತಲಾಂತರದಿಂದ ಅವರು ನಮ್ಮ ಅಂಗೈ ಗಿರಾಕಿಗು ಅನ್ನಿ.”
ಈ ಸಂಬಂಧದಿಂದ ಆಗಬಹುದಾದ ತನ್ನ ವ್ಯಾಪಾರದ ಅಭಿವೃದ್ಧಿ ಯನ್ನು
ಚಿತ್ರಿಸಲು ಸಾಹುಕಾರನ ಮನಸ್ಸು ಹಾತೊರೆಯಿತು. ಅಸೂಯಾಪರರು ತೊಂದರೆ
ಕೊಟ್ಟಾರು ; ರಹಸ್ಯ ಸದಾಕಾಲವೂ ರಹಸ್ಯವಾಗಿಯೇ ಇರಬೇಕು_ ಎಂದುಕೊಂಡ
ನಿವೇದಿಸಿದ :
“ಅಪ್ಪಣೆಯಾಗಲಿ. ಸೇವೆಗೆ ಸಿದ್ಧನಾಗಿದ್ದೇನೆ.”
“ಜಾಣಪ್ಪನವರ ಹೆಸರು ಕೇಳಿದೀರಾ ?”
“ಈ ಮೊದಲು ಮುಖ್ಯಮಂತ್ರಿಯಾಗಿದ್ದೋರು.”
“ರಾಜ್ಯಪಾಲರಾಗಿ ಕೇರಳಕ್ಕೆ ಹೋಗ್ತಿದ್ದಾರೆ. ನಾಳೆಯಲ್ಲಿ ನಾಡದು ಅವರಿಗೆ
ಸನ್ಮಾನ ಇಟ್ಟುಕೊಂಡಿದ್ದೇವೆ. ಪುರಭವನದಲ್ಲಿ ಬಹಿರಂಗ ಸಭೆ. ಅಲ್ಲಿ ಅವರಿಗೂ
ಜಾಣಮ್ಮನವರಿಗೂ ನೆನಪಿನ ಕಾಣಿಕೆ ಕೊಡಬೇಕು. ಆಯುಷ್ಯ ಪೂರ್ತಿ ತಮ್ಮ
ಹತ್ತಿರ ಇಟ್ಟುಕೊಳ್ಳಲು ಯೋಗ್ಯವಾದ ಎರಡು ಹಾರ ಎರಡು ಶಾಲು, ಸಮಾ
ರಂಭದ ಫಿಲ್ಸ್ ತೆಗೀತಾರೆ, ನೀವು ವೇದಿಕೆಯ ಮೇಲೆ ಇರಬೇಕು.”
“ಛೇ ! ಛೇ ! ನಾನು ಬೇಡ, ಆ ಅಮ್ಮನವರಿಗೆ ಖಾದಿ ರೇಷ್ಮೆ ಸೀರೆ, ಅಪ್ಪ
ನವರಿಗೆ ಅತ್ಯಂತ ನಾಜೂಕಿನ ಖಾದಿ ಸೂಟ್ ಬಟ್ಟೆ, ಬೆಳ್ಳಿ ಹೂ ಸುನೇರಿ ಇರುವ
ಶ್ರೀಗಂಧದ ಹಾರ, ಕಾಶ್ಮೀರದ ಕೈ ಮಗ್ಗದ ಶಾಲು, ಪ್ರತಿಯೊಂದು ಅರ್ಧ
ಡಜನ್ ಇಲ್ಲಿಗೆ ತಕ್ಕೇನೆ. ತಾವೇ ಆಯ್ಕೆ ಮಾಡಿ.”
"ಅರ್ಧ ಡಜನ್ ಬೇಡಿ, ನೀವು ಆಯ್ಕೆ ಮಾಡಿದರೆ ನಾನು ಮಾಡಿದಂತೆಯೇ,
ನಾಡದು ಬೆಳಗ್ಗೆ ಹತ್ತು ಘಂಟೆಗೆ ತಕ್ಕೀರಾ ? ಸಮಾರಂಭದ ಉಸ್ತುವಾರಿಗೆ ಇಬ್ಬರು
ಮಂತ್ರಿಗಳನ್ನು ನೇಮಿಸಿದ್ದೇನೆ. ತಂದ ವಸ್ತುಗಳನ್ನು ನನ್ನ ಎದುರಲ್ಲೇ ಅವರಿಗೆ
ಒಪ್ಪಿಸಿಬಿಡಿ,”
“ದೊಡ್ಡ ಜವಾಬ್ದಾರಿ ಹೊರಿಸಿದೀರಿ. ದೈವ ಕೃಪೆಯಿಂದ ಇದನ್ನು ಯಶಸ್ವಿ
ಯಾಗಿ ನಿರ್ವಹಿಸೇನು, ಇನ್ನು ಅಪ್ಪಣೆ ಕೊಡಿ, ಮಾಮಾತಾಜಿ."
“ಹೋಗಿ ಬನ್ನಿ ಸಾಹುಕಾರರೆ.”
ಹೊರಗೆ ಪರಶುರಾಮನಿಗೂ ವಂದಿಸಿ, ಧನಂಜಯಕುಮಾರ ಹೊರಬಿದ್ದ.
ನಡೆದದ್ದೆಲ್ಲ ಅನಿರೀಕ್ಷಿತ ತಿರುವುಗಳ ಪತ್ತೇದಾರಿ ಕಥೆಯಂತಿತ್ತು. ಕಾಣಿಕೆಗಳ ಸಂಗ್ರ
ಹಕ್ಕೆ ಮೂರು ನಾಲ್ಕೂ ಕಡೆ ಹೋಗುವುದು ಅಗತ್ಯವಿತ್ತು, ಹಣ ? ಮಾತಾಜಿ
ಯಿಂದ ಖಂಡಿತ ತೆಗೆದುಕೊಳ್ಳಬಾರದು. ಮುಂದೆ ಏನಾದರೂ ದೊಡ್ಡ ಆರ್ಡರು
ಕೊಡಿಸುತ್ತಾರೆ. ಖರೀದಿ ನಾಳೆ, ಈಗ ತನ್ನ ಅಂಗಡಿಗೆ, ರಾತ್ರಿಯ ವರೆಗಿನ
ಬಿರುಸಿನ ವ್ಯಾಪಾರದ ವೇಳೆ ಅಲ್ಲಿರಲೇಬೇಕು.
ರಾತ್ರೆ ಹೆಂಡತಿಗೆ ಕಾಣಿಕೆಗಳ ವಿವರ ಹೇಳಿದುದಾಯಿತು. ಮುಖ್ಯಮಂತ್ರಿಯನ್ನು