ಪುಟ:ಮಿಂಚು.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

133






೧೪

ಮಂಗಡ ಪತ್ರದ ಮೇಲಣ ಚರ್ಚೆಯ ಆರಂಭದ ದಿನ ಸದನದಲ್ಲಿ ಶಾಶಕರ
ಹಾಜರಿ ಅರ್ಧಕ್ಕೆ ಇಳಿಯಿತು. ದಿನಕಳೆದಂತೆ ಒಮ್ಮೆ ಒಬ್ಬಿಬ್ಬರು ಹೆಚ್ಚು, ಒಬ್ಬಿಬ್ಬರು
ಕಮ್ಮಿ. ಒಮ್ಮೊಮ್ಮೆ ಕನಿಷ್ಠ ಸಂಖ್ಯೆಯೂ ಇಲ್ಲದೆ, ಕಲಾಪಗಳನ್ನು ಮುಂದಕ್ಕೆ ಹಾಕ
ಬೇಕಾಗುತ್ತಿತ್ತು, ಹದಿನೈದು ಮಿನಿಟುಗಳ-ಅಥವಾ ಅರ್ಧ ಗಂಟೆಯ ಮಟ್ಟಿಗೆ, ಟೀಕೆ
ಗೋಸ್ಕರ ಟೀಕೆ, ಸಮರ್ಥನೆಗೊಸ್ಕರ ಸಮರ್ಥನೆ. ಭರ್ತನೆ ಅಥವಾ ಭಟ್ಟಂಗಿತನ,
ಸೌದಾಮಿನಿ ಶಾಸಕರ ಗೈರುಹಾಜರಿ ಕಂಡು ಸಿಟ್ಟಾದಳು. ಸಭಾಪತಿ ಲಕ್ಷ್ಮೀ
ಪತಯ್ಯ ಇಳಿದನಿಯಲ್ಲಿ, ತಮ್ಮ ಕೊಠಡಿಯಲ್ಲಿ ಅಂದರು :
“ಮಾತಾಜಿ, ಶಾಸಕಾಂಗದ ಪಕ್ಷದ ಸಭೇಲಿ ಈ ವಿಷಯ ಎಂಡು ಚುರುಕು
ಮುಟ್ಟಿಸಿ.”
“ಹಾಗೆ ಮಾಡೋದೇ ಸರಿ ಅಂತ ಇದೇ ಈಗ ನನಗೂ ಅನಿಸ್ತು.”
ಪ್ರತಿ ಸೋಮವಾರ ಶಾಸಕಾಂಗ ಪಕ್ಷದ ಸಭೆ. (ಐವರೇ ಇದ್ದರೇನಂತೆ, ಪ್ರಜಾ
ಪಕ್ಷದ ಶಾಸಕರೂ ಸಭೆ ಸೇರುತ್ತಿದ್ದರು) ಸೌದಾಮಿನಿ ಎಚ್ಚರಿಸಿದಳು :
“ಪ್ರತಿಯೊಬ್ಬ ಶಾಸಕನ ವಿಷಯದಲ್ಲೂ ದಾಖಲೆ ಪುಸ್ತಕ ಇಡಬೇಕಾಗುತ್ತೆ,
ಗೈರುಹಾಜರಿ ಅಪರಾಧ, ಸಹಿಹಾಕಿ ಹೊರಟುಬಿಡೋದು ಸರಿಯೇ ? ತೆರಿಗೆದಾರರ
ಹಣದ ದುರ್ವಿನಿಯೋಗ ನಾನು ಸಹಿಸಲಾರೆ.”
ವೃದ್ದ ಶಾಸಕನೊಬ್ಬ ಎದ್ದು ನಿಂತು ಅಂದ :
“ಬೇಡಿ ಮಾತಾಜಿ, ಬೇಡಿ, ಕಠಿನ ನಿರ್ಬಂಧ ಹೇರಬೇಡಿ. ಮನೆ ಮಠ, ಮಕ್ಕಳು
ಮರಿ, ಕಾಹಿಲೆ ಕಸಾಲೆ. ನಾವು ಮನುಷ್ಯರಲ್ಲವಾ ? ಸ್ವಲ್ಪ ಹೆಚ್ಚು ಕಮ್ಮಿ ಆದ
ರೇನಂತೆ ?”
ಮಕ್ಕಳು ಮರಿ ಎಂದು ಈ ಗೂಬೆ ತನ್ನನ್ನು ಲೇವಡಿ ಮಾಡುತ್ತಿಲ್ಲವಷ್ಟೆ-
ಎಂದು ಸೌದಾಮಿನಿ ಹುಬ್ಬೇರಿಸಿದಳು. ಸಂಯಮ ತಂದುಕೊಂಡು ಅಂದಳು :
“ನೀವು ಹೇಳಿದ್ದರಲ್ಲಿ ನಿಜಾಂಶ ಇಲ್ಲ ಅನ್ನಲಾರೆ. ಆದರೆ, ರಾಜಕೀಯವೇ
ನಮ್ಮ ಉಸಿರು ಅನ್ನೋದನ್ನು ನಾವು ಮರೀಬಾರದು. ಬಂಡೆ ಬಹುಮತ ಇದೆ
ಅಂತ ಜನಸೇವೆ ಬಗ್ಗೆ ಅಲಕ್ಷ್ಯ ತೋರಿಸಿದರೆ ಮೊಸಳೆ ಬಂದೀತು, ನಿಜವಾದ
ಮೊಸಳೆ !” (ಇಂದ್ರಾವತಿ ನದಿಯ ಸ್ನಾನಘಟ್ಟದ ಬಳಿ ಮೊಸಳೆ ಇರಲಿಲ್ಲ.)
ಮರುದಿನದಿಂದ ಹಾಜರಾತಿಯಲ್ಲಿ ಗಣನೀಯವಲ್ಲವಾದರೂ ಸ್ವಲ್ಪ ಮಟ್ಟಿನ
ಏರಿಕೆ ಕಂಡು ಬಂತು,