ಪುಟ:ಮಿಂಚು.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

8

ಪುಟ್ಟವ್ವ ಅಳುಕುತ್ತ ಕರೆಗಂಟೆಯೊತ್ತಿದಳು. ತಬ್ಬಿಕೊಳ್ಳಬೇಕು, ತುಸು ಅಳ ಬೇಕು. “ಮೃದುಲಾಬೆನ್, ನಾನು ಕಾಗದ ಕೂಡಾ ಬರೀಲಿಲ್ಲ. ನನ್ನ ಆಸ್ತಿತ್ವ ಕ್ಕೊಂದು ರೂಪಕೊಟ್ಟವರು ನೀವು. ಅದನ್ನು ಮರೆತಂತೆ ನಟಿಸಿದ ಕೃತಘ್ನೆ ನಾನು.” ಮೊದಲೇ ರೂಪಿಸಿದ್ದ ವಾಕ್ಯಗಳು. ಮರೆತೆನೂ ಆಭಾಸವಾದೀತು. ಬಾಗಿಲು ತೆರೆ ದವಳು ಒಬ್ಬಳು ಹುಡುಗಿ. ಗುಜರಾಥಿಯಂತೆ ಕಂಡಳು. ಮಾತು ಮರಾಠಿಯಲ್ಲಿ.
“ಯಾರು ಬೇಕು ?”
“ಮೃದುಲಾಬೆನ್ ಇದಾರಾ ?”
“ಹ್ಞ. ನೀವು ?”
“ಅವರ ಗೆಳತಿ. ಕಲ್ಯಾಣನಗರದಿಂದ ಬಂದಿದೀನಿ.”
“ಕೂತ್ಕೊಳ್ಳಿ” ಎಂದು ಹೇಳಿ, ಫ್ಯಾನ್ ಹಾಕಿ, ಆಕೆ ಒಳಗೆ ನಡೆದಳು. ಪುಟ್ಟವ್ವ ಟ್ರಂಕ್ ಚೀಲಗಳನ್ನು ಒಳತಂದಳು.
ತಕ್ಷಣ ಬರಲಿಲ್ಲ ಮೃದುಲಾಬೆನ್. ತನ್ನ ಮೇಲೆ ಸಿಟ್ಟು. ಮಾನಸಿಕ ತಾಕ ಲಾಟವೇನೂ. (ಒಮ್ಮೆ ಹೊರಗೆ ಬಾ. ನೋಡಿಯೇ ಬಿಡ್ತೀನಿ. 'ಮೃದುಲಾಬೆನ್, ನಾನು ಕಾಗದ ಕೂಡಾ ಬರೀಲಿಲ್ಲ....' ವಾಕ್ಯ ಮರೆತಿಲ್ಲ...)
ಅಲಂಕೃತ ದಿವಾಣಖಾನೆ. ಗೋಡೆಯಲ್ಲಿ ಮಹಾತ್ಮ ; ಮಗ್ಗುಲಲ್ಲಿ ಠಕ್ಕರ್ ಬಾಪಾ (ಠಕ್ಕರಿಗೆಲ್ಲ ಇವನು ಬಾಪೂ ?) ತ್ಸು-ತ್ಸು ಕೆಟ್ಟ ವಿಚಾರಗಳು ! ಇವರು ಗುಜರಾಥಿನವರೆಂದು ಎಷ್ಟು ಹೆಮ್ಮೆ ಮೃದುಲಾಗೆ. ಅವಳದೊಂದು ವಾದವಿತ್ತು : ಸೇವೆ ಎನ್ನುವ ಪದವನ್ನು ಭಾರತಕ್ಕೆ ನೀಡಿದ್ದೇ ಗುಜರಾಥಿ ಭಾಷೆ. ಆಗಲಪ್ಪ, ಆಗಲಿ.
ಹಡಗು ನಿಧಾನವಾಗಿ ಬರುತ್ತಿದೆ. ಎದ್ದು ನಿಲ್ಲುವುದು ಮೇಲು. ಪುಟ್ಟವ್ವನೇ ಇರಬೇಕೆಂದು ತರ್ಕಿಸಿದ್ದಳು ಮೃದುಲಾ. ಸಿಟ್ಟು ಬಂದಿತ್ತು, ಕಡಮೆಯಾಗಿತ್ತು.
“ಪುಟ್ಟಾ ! ನೀನು !”
ಸಾಲುಗಳು ದಡದಡಿಸಿದುವು. ...“ಕೃತಘ್ನೆ ನಾನು.” ಒಬ್ಬರನ್ನೊಬ್ಬರು ತಬ್ಬಿಕೊಂಡರು. ಪುಟ್ಟವ್ವ ಅತ್ತಳು. ಆ ಕಂಬನಿ ಕಂಡು ಮೃದುಲೆಯೂ ಕರಗಿದಳು.
ಮೃದುಲಾಬೆನ್ ಗುರು, ಪುಟ್ಟವ್ವ ಶಿಷ್ಯೆ.
“ಬರಿ ಕೈಲಿ ಬಂದೆಯಾ ?”
"ಇದ್ದಕ್ಕಿದ್ದಂತೆ ಹೊರಟೆ."