ಪುಟ:ಮಿಂಚು.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

142

ಮಿಂಚು

ಸೌದಾಮಿನಿ, ಅಷ್ಟರ ಮೇಲೆ ಬ್ರಹ್ಮಾಸ್ತ್ರವಿಲ್ಲವೆ? ಸಮಯ ನೋಡಿ ಆ ಅನಾಥಾಶ್ರಮ
ವನ್ನು ಸರಕಾರದ ವಶಕ್ಕೆ ತೆಗೆದುಕೊಂಡರಾಯಿತು...
“ಪರಶುರಾಮ್, ಎಲ್ಲಿದೆ ಸಹಾಯಧನ ಕೇಳಿ ಬಂದ ಅನಾಥಾಶ್ರಮದ ಆ
ಅರ್ಜಿ ?”
ಆಪ್ತ ಕಾರ್ಯದರ್ಶಿ ಅದನ್ನು ಹುಡುಕಿಕೊಟ್ಟ, ಅಂಚಿನಲ್ಲಿ ಒಂದು ಲಕ್ಷ
ರೂಪಾಯಿ ಮಂಜೂರು ಮಾಡಿ ಎಂದು ಸೂಚಿಸಿ, “ಸಮಾಜಕಲ್ಯಾಣ ಮಂತ್ರಿಗೆ
ಈಗಲೇ ಕಳಿಸು. ಇವತ್ತು ಸಂಜೆಯೊಳಗೆ ಚೆಕ್ ಆಶ್ರಮದವರ ಕೈ ಸೇರಬೇಕು”
ಎಂದಳು ಸೌದಾಮಿನಿ.
ಆ ರಾತ್ರಿ ಸುಲೋಚನಾಬಾಯಿ ಗಂಡನಿಗೆ ಸಿಹಿಯೂಟ ಬಡಿಸಿದಳು.
ಸರಕಾರಕ್ಕೆ, ವೈಯಕ್ತಿಕವಾಗಿ ಮುಖ್ಯಮಂತ್ರಿ ಸೌದಾಮಿನಿದೇವಿಗೆ, ಕೃತಜ್ಞತೆ
ಸಲ್ಲಿಸುವ ಪತ್ರದೊಡನೆ (ಮತ್ತು ಒಂದು ಹಾರದೊಡನೆ) ಸುಲೋಚನಾಬಾಯಿ
ಮತ್ತು ಆಡಳಿತ ಮಂಡಳಿಯ ಇಬ್ಬರು ಕಾರ್ಯಸೌಧಕ್ಕೆ ಹೋದರು.
ಮುಖ್ಯಮಂತ್ರಿ ಎದ್ದು ಹಾರ ಸ್ವೀಕರಿಸಿದಳು. ತಾನೂ ನಿಂತೇ ಇದ್ದ
ಸುಲೋಚನಾಬಾಯಿ ಮೈಯೆಲ್ಲ ಕಣ್ಣಾಗಿ ಸೌದಾಮಿನಿಯನ್ನು ದಿಟ್ಟಿಸಿದಳು. ಅವಳಿ
ಅಲ್ಲವಾದರೂ ಒಬ್ಬರ ಹಾಗೆ ಇನ್ನೊಬ್ಬರು ಇರಬಾರದೆ ? ಧ್ವನಿಯಲ್ಲೇನೊ
ಸಾಮ್ಯವಿಲ್ಲ. ಈಕೆ ಮಾತಾಜಿ, ಕರುಣಾಮಯಿ. ಇಲ್ಲದೆ ಹೋದರೆ ಒಂದು ಲಕ್ಷ
ಇಷ್ಟು ಬೇಗನೆ ಸಿಗುವುದೆಂದರೇನು ?
“ನಮ್ಮ ಕಟ್ಟಡ ಪೂರ್ತಿಯಾದಾಗ ತಾವು ಉದ್ಘಾಟನೆಗೆ ಬರಬೇಕು,”ಎಂದು
ಕೈಜೋಡಿಸಿ ಕೇಳಿದಳು ಸುಲೋಚನಾಬಾಯಿ.
“ಆಗಲಿ, ನಿಮ್ಮ ವಸತಿ ಶಾಲೆಯ ಅಭ್ಯುದಯವನ್ನು ಹೃತ್ಪೂರ್ವಕವಾಗಿ
ಹಾರೈಸ್ತೀವಿ.”
“ಒಂದು ಲಕ್ಷ ಸಹಾಯಧನ ಕೊಟ್ಟ ವಿಷಯ ಪತ್ರಿಕೆಗಳಿಗೆ-"
“ವಾರ್ತಾ ಇಲಾಖೆಯ ಮೂಲಕ ಆ ಸುದ್ದಿ ಹೋಗ್ತದೆ. ನಮಸ್ಕಾರ.”
ಸೌದಾಮಿನಿ ಕುಳಿತು ಕೆಲವು ಕ್ಷಣ ಅಂತರ್ಮುಖಿಯಾದಳು. ಗುರುತು ಹಿಡಿದರೆ?
ಇಲ್ಲ-ಇಲ್ಲ ! ಆ ಮಾಚಯ್ಯ ಏನಾದನೊ ? ಗಿರಿಜ ? ಆ ಪೋಲಿ ಪಟಾಲಂ? ಆ
ಗತಕಾಲವನ್ನು ಸ್ಮರಿಸುವ ಅಗತ್ಯವಾದರೂ ಏನು ? ಇದು ಬೇರೆಯೇ ಶಕೆ, ಬೇರೆಯೇ
ಯುಗ, ಆದರೆ ಆ ಮರ ? ಇರುಳಲ್ಲಿ ಅದರ ಹಾಸಿನ ಕೆಳಗೆ? ಅಲ್ಲಿಗೊಮ್ಮೆ ಹೋಗ
ಬೇಕು, ಹೋಗಬೇಕು. ರಂಗಧಾಮನನ್ನು ಸರಿಪಡಿಸಬೇಕು.
ಹೊರಗೆ ಸಂದರ್ಶಕರು ಸರದಿಗಾಗಿ ಕಾದಿದ್ದರು. ಒಳಗೆ ಬಂದವನು ಮುಂಬಯಿ
ವಿಳಾಸದ ಯುವ ಕೈಗಾರಿಕೋದ್ಯಮಿ, ವಿದ್ಯುನ್ಮಾಪಕಗಳನ್ನು ತಯಾರಿಸಿ ಕಿಷ್ಕಿಂಧೆ
ಸರಕಾರಕ್ಕೂ ಇತರ ರಾಜ್ಯ ಸರಕಾರಗಳಿಗೂ ಮಾರುವ ಯೋಜನೆ. ಟಿಪ್ಪಣಿ