ಪುಟ:ಮಿಂಚು.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

143

ಕಾರ್ಯವೆಲ್ಲ ಮುಗಿದಿತ್ತು. ಮುಖ್ಯಮಂತ್ರಿ ಒಪ್ಪಿದರೆ ಸಹಿ ಹಾಕ್ತೇನೆ. ಹೋಗಿ
ನೋಡಿ,” ಎಂದಿದ್ದ ಉದ್ಯಮಮಂತ್ರಿ:
ಸೌದಾಮಿನಿ : “ಪಕ್ಷಕ್ಕೆ ಹತ್ತು ಲಕ್ಷ.”
ಆತ : “ಒಪ್ಪಿದೆ.”
ಸೌದಾಮಿನಿ : ಸಂಜೆ ಗೃಹಕಾರ್ಯಾಲಯಕ್ಕೆ ಬನ್ನಿ.”
ಆತ : “ಧನ್ಯವಾದ.”
ಪರಶುರಾಮನತ್ತ ನೋಡಿ ಮುಖ್ಯಮಂತ್ರಿ ಅಂದಳು :
“ನೆಕ್ಸ್ಟ್.”
....
ತಿಂಗಳಿಗೊಮ್ಮೆ ನಕುಲದೇವ್‌ಜಿ ತಪ್ಪದೆ ಪೋನ್ ಮಾಡುತ್ತಿದ್ದರು. ಚುಟುಕು
ಸಂದೇಶ : “ದೂತ ಬರ್ತಿದ್ದಾನೆ.” ದೂತನ ಜತೆ ಒಬ್ಬ ಅಂಗರಕ್ಷಕ, ಇರಸಾಲು
ಹೋದ ಬಳಿಕ ಸೌದಾಮಿನಿ ಮಂತ್ರಿಗಳಿಗೆ ತಿಳಿಸುತ್ತಿದ್ದಳು : “ಈ ಸಲದ್ದು
ಹೋಯ್ತು." ಮುಂದಿನ ಸಲಕ್ಕಾಗಿ ಇಲ್ಲಿ ಜಮಾಬಂದಿ ಶುರುವಾಗಲಿ ಎಂದು ಅದರ
ಅರ್ಥ, ಸೌದಾಮಿನಿ ಹೇಳಿದಂತೆ ರಂಗಧಾಮ ವಿದ್ಯಾಧರರಿಬ್ಬರೂ ಲೆಕ್ಕವಿಟ್ಟರು.
ಒಂದು ಸಲ ಸಂಪುಟಸಭೆ ಮುಗಿದೊಡನೆ ಸೌದಾಮಿನಿ ಕೇಳಿದಳು :
“ಕೊಸರನ್ನೆಲ್ಲ ಏನ್ಮಾಡ್ತೀರಾ ?”
ಆರು ಮಂತ್ರಿಗಳ ಸಿಟ್ಟಿಗೂ ತಾನೇ ಧ್ವನಿ ಎಂಬಂತೆ ಬಾಲಾಜಿ ಬಲ ಅಂಗೈ
ಮುಷ್ಟಿ ಹಿಡಿದು ಬಗ್ಗಿಸಿ, “ಮಾಡ್ತೀವಿ ಇದು !” ಎಂದ.
ಸಿಟ್ಟು ಬೆಂಕಿಯಾಗಿ ಸೌದಾಮಿನಿ ಗುಡುಗಿದಳು :
“ಏನೆಂದಿರಿ ?"
ಸಂಗಪ್ಪ ಕೇಳಿದ :
“ನಾವು ದಿಲ್ಲಿಯ ಚಾಕರಿಗೆ ನಿಂತಿದೀವಾ ?”
ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು ಎಂದು ಮುಖ್ಯಮಂತ್ರಿ ತಕ್ಷಣ
ತಣ್ಣೀರೆರಚಿದಳು :
“ಚುನಾವಣೆ ಸಮಯದಲ್ಲಿ ದಿಲ್ಲಿಯಲ್ಲವ ದುಡ್ಡು ಸುರಿಯೋದು ?”
ನಾರಣಪ್ಪನೆಂದ :
“ಮಳೆಗಾಲ ಚಳಿಗಾಲಕ್ಕೇಂತ ಪ್ರಾಣಿಪಕ್ಷಿಗಳೂ ಕೂಡಿಡ್ತವೆ. ಇವತ್ತಿನ ಹೊಸ
ಎಕ್ಕಡ ನಾಳೆ ಸವೆದೀತು ಅನ್ನೋ ಯೋಚನೆ ಬೇಡವ ?”
“ಏನು ರಂಗಧಾಮ್ ಸುಮ್ಮನಿದೀರಲ್ಲ ? ಒಮ್ಮೊಮ್ಮೆ ಕೊಸರು ನಮ್ಮವರೆಗೂ
ತಲಪಲಿ,” ಎಂದು ಮುಖ್ಯಮಂತ್ರಿ ಆರಂಭದಲ್ಲಿ ತನಗೆ ಬಹಳ ಹತ್ತಿರದವನಾಗಿದ್ದ
ಯುವ ಮಂತ್ರಿಯತ್ತ ನೋಡಿ ಅಂದಳು.