ಪುಟ:ಮಿಂಚು.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

150

ಮಿಂಚು

 ಆತ್ಮೀಯ ಧ್ವನಿಯಲ್ಲಿ ಅವಳೆಂದಳು:
"ಭಾರೀ ಫೋಟೋ ಅಂಗಡೀಲಿ ಹಾಕಿದೀರಂತೆ!"
ಧನಂಜಯ "ಇಹ್ಹಿ" ಎಂದು ನಕ್ಕ.
"ಇದು ಕೋಟಿಗಟ್ಟಲೆ ವ್ಯವಹಾರ. ಆದಷ್ಟು ಬೇಗನೆ ಐವತ್ತು ಲಕ್ಷ ನಮ್ಮ
ಪಕ್ಷಕ್ಕೆ ಸಂದಾಯವಾಗಬೇಕು."
"ಅಪ್ಪಣೆ....ತಾವೊಮ್ಮೆ ನಮ ಅಂಗಡಿಗೆ ಭೇಟಿ...."
"ಆಗಲಿ, ಆಗಲಿ, ಬರ್ತೇವೆ... ಪರಶುರಾಮ್, ಈ ಫೈಲನ್ನು ಈಗಲೇ ನಿಗಮದ
ಅಧ್ಯಕ್ಷರಿಗೆ ಕಳಿಸಿಕೊಡು. ಅವರ ಆರ್ಡರಿನ ಪ್ರತಿ ನಾಳೆ ನನಗೆ ಬೇಕು."
"ಹ್ಞ. ಮಾತಾಜಿ."
ವಂದಿಸುತ್ತಿದ್ದ ಸಾಹುಕಾರನಿಗೆ ಸೌದಾಮಿನಿ ಅಂದಳು:
"ಧನಂಜಯ್, ಹೋಗಿಬನ್ನಿ. ನಮಸ್ಕಾರ."
....ರಂಗಧಾಮ್ ಬಿರುಸಿನಿಂದ ನಡೆದು ಬಂದಾಗ, ಆತನ ಪರಿಚಯವಿದ್ದ ಕೆಲ
ಸಂದರ್ಶಕರು ಎದ್ದು ನಿಂತರು. ಪರಶುರಾಮನ ಹತ್ತಿರ ಸೇರಿದಂತೆ ರಂಗಧಾಮನ
ಚಲನೆಯ ಗತಿ ನಿಧಾನವಾಯಿತು.
"ಒಂದು ನಿಮಿಷ ಕಾಣಬೇಕಲ್ಲ? ಅರ್ಜೆಂಟು."
ಒಳಕ್ಕೆ ಹೋಗೆಂದು ಕೈಸನ್ನೆ ಮಾಡಿದ್ದ ವ್ಯಕ್ತಿಯನ್ನು ಪುನಃ ಕೂತಿರಲು
ಸೂಚಿಸಿ, "ಬನ್ನಿ ಸಾರ್" ಎನ್ನುತ್ತ ಪರಶುರಾಮ ರಂಗಧಾಮನೊಡನೆ ಒಳನಡೆದ.
ಆತನ ಕೈಯಲ್ಲೂ ಇತ್ತು ಒಂದು ಫೈಲು.
ಹತ್ತಿರದ ಪೀಠಕ್ಕೆ ಕರೆದು ಸೌದಾಮಿನಿ ಅಂದಳು:
"ಫ್ರಾಂಕ್ ಫರ್ಟ್ ಪ್ರವಾಸಕ್ಕೆ ಸಂಬಂಧಿಸಿದ್ದಾ?"
"ಹೌದು, ಮಾತಾಜಿ. ವಿದ್ಯುಚ್ಛಕ್ತಿ ನಿಗಮದ ಅಧ್ಯಕ್ಷರನ್ನೂ ಕರಕೊಂಡು
ಹೋಗ್ತೀನಿ."
"ಎಷ್ಟು ಟರ್ಬೈನುಗಳು ಬೇಕಂತೆ ?"
"ಹತ್ತು."
"ಅರ್ಥಇಲಾಖೆ ಏನು ಹೇಳ್ತದೆ ?"
"ವಿಶ್ವಬ್ಯಾಂಕ್ ಸಾಲ ಮಂಜೂರಾಗಿದೆ. ಆದರೆ, ಕೇಂದ್ರದ ತಾಂತ್ರಿಕ ಸಮಿತಿಯ
ಒಪ್ಪಿಗೆ ಬೇಕಂತೆ."
"ದಿಲ್ಲಿಗೆ, ನಕುಲ್ ದೇವ್ ಜಿಗೆ, ಫೋನ್ ಮಾಡ್ತೇನೆ. ಮೊದಲು ನೀವು ಅಲ್ಲಿಗೆ
ಹೋಗಿ. ಯಾವತ್ತು ವಿದೇಶಯಾತ್ರೆ ?"
"ತಿಂಗಳ ಕೊನೇ ವಾರ. ಓಪನ್ ಟಿಕೆಟ್ ತಗೋಳ್ತೆವೆ."
"ಏರ್ ಇಂಡಿಯಾದಲ್ಲೇ ಹೋಗಿ. ದೇಶಾಭಿಮಾನದಲ್ಲಿ ಕಡಮೆ ಆಗಬಾರದು."