ಪುಟ:ಮಿಂಚು.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

151

“ಏರ್‌ಇಂಡಿಯಾದಲ್ಲೇ ಲಂಡನಿಗೆ ಹೋಗಿ, ಅಲ್ಲಿಂದ ರೋಮ್‌ಮಾರ್ಗವಾಗಿ
ವಾಪಸು ಬರಬೌದಾ ?”
“ಇದೇನು ಪ್ರಶ್ನೆ ? ಪ್ಯಾರಿಸ್‌ಗೂ ಹೋಗ್ಬನ್ನಿ...ಯಾವುದಾದರೂ ಟೆನ್ನಿಸ್
ಟೂರ್ನಮೆಂಟ್ ಇದ್ದರೆ ನೋಡಿ ಬನ್ನಿ.”
“ವಿಚಾರಿಸಿದೇನೆ. ಆ ವೇಳೆಯಲ್ಲಿ ಯಾವುದೂ ಇಲ್ಲ !”
"So sorry ಹೊರಡೋದಕ್ಕೆ ಮುಂಚೆ ನೀವೂ ನಿಗಮದ ಅಧ್ಯಕ್ಷರೂ ಒಮ್ಮೆ
ಬನ್ನಿ ...ಅಂದಹಾಗೆ ನಿಮ್ಮ ಅಂಬಾಸಡರ್ ಯಾವಾಗ ತಗೊಳ್ತೀರಾ ?”
“ಇವತ್ತೇ...”
“ಇವತ್ತು ನನಗೆ ಬಿಡುವಿಲ್ಲ. ನಾಳೆ ಡೆಲಿವರಿ ತಗೊಂಡು ಸಾಯಂಕಾಲ ನಮ್ಮ
ನಿವಾಸಕ್ಕೆ ಬನ್ನಿ. ನಿಮ್ಮ ಹೊಸ ಕಾರಿನಲ್ಲಿ ನನಗೊಂದು ರೈಡ್ ಕೊಡೋಲ್ವ ?”
“ಕೊಡ್ತೀನಿ, ಮಾತಾಜಿ.”

***

ಹೊಸ ಅಂಬಾಸಡರ್ ಕಾರ್ಯಸೌಧಕ್ಕೇ ಬಂತು. ಡ್ರೈವರನಿಗೆ ಬಿಡುಗಡೆ ನೀಡಿ
ರಂಗಧಾಮ ತಾನೇ ಚಾಲಕನಾಗಿ ಮುಖ್ಯಮಂತ್ರಿಯ ನಿವಾಸವನ್ನು ತಲಪಿದ.
ಊಟಕ್ಕೆ ಇರಬೇಕಾಯಿತು.
ಸೌದಾಮಿನಿ ಕೇಳಿದಳು :
“ಶ್ರೀಮತಿಯವರನ್ನು ತವರಿಗೆ ಕಳಿಸಿದಿರಾ ?”
“ಮುಂದಿನ ವಾರ ಬಂದು ಕರಕೊಂಡು ಹೋಗ್ತಾರೆ.”
“ಐರೋಪ್ಯ ಪ್ರವಾಸ ಮುಗಿಸಿ ಬರುವಾಗ ರಾಜಕುಮಾರ ಸ್ವಾಗತಿಸ್ತಾನೆ !”
“ರಾಜಕುಮಾರ-ಕುಮಾರಿ ಎಲ್ಲಾ ಒಂದೇ.”
“ಈಗ ಶ್ರೀಮತಿಯವರಿಗೆ ವಿಶ್ರಾಂತಿ, ನೋಡ್ಕೊಳ್ಳೋಕೆ ಯಾರಿದ್ದಾರೆ ?”
“ವಯಸ್ಸಾದ ನನ್ನ ಸೋದರತ್ತೆ ಒಬ್ಬರಿದ್ದಾರೆ.”
"ಹ್ಯಾಗಿದೆ ಕಾರು ?”
“ಸೊಗಸಾಗಿದೆ.”
“ನನಗೆ ಪ್ಯಾರಿಸಿನಿಂದ ಏನು ತರ್ತೀರಿ ?”
“ಹೇಳಿ, ಏನು ತರಲಿ ?”
“ಒಂದು ಪುಟ್ಟ ಸೆಂಟ್‌ಬಾಟಲ್.”
“ಆಗಲಿ, ಮಾತಾಜಿ."
ಸೌದಾಮಿನಿ ಒಳಹೋಗಿ ಸುಗಂಧ ದ್ರವ್ಯವನ್ನಿಷ್ಟು ಪೂಸಿ, ಶಾಲು ಹೊದೆದು
ಕೊಂಡು ಬಂದಳು.