ಪುಟ:ಮಿಂಚು.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

10

ಮಿಂಚು

ಫ್ಲ್ಯಾಟ್‌ನಲ್ಲಿರ್ತಿದ್ದೆ........ಇರಲಿ. ನೀನು ಗುಜರಾಥಿ, ಮರಾಠಿ, ಹಿಂದೂಸ್ಥಾನಿ ಮರೆತಿಲ್ಲವಲ್ಲ?”
“ಹೇಗೆ ಮರೆತೇನು ಮೃದುಲಾಬೆನ್ ? ಈ ನೀರು ಕುಡಿದೇ ಅಲ್ಲವಾ ನಾನು ಬೆಳೆದದ್ದು ?”
“ನಿನ್ನ ಕೊಠಡಿ ಹೇಗಿದೆ ? ಅದು ಅಟಾಚ್ಡ್ ಬಾತ್. ಸ್ನಾನಮಾಡಿ ಬಾ. ಊಟ ಆದ್ಮೇಲೆ ಸಂಜೆವರೆಗೂ ನಿದ್ದೆ ಮಾಡು. ರಾತ್ರಿಯೆಲ್ಲ ನಿನ್ನ ಸಾಹಸದ ಕಥೆ ಹೇಳು.”

***

ಈ ಪುಟ್ಟ (ವ್ವ) ಹೇಳುವುದೆಲ್ಲ ನಿಜವಾದರೆ, ಇವಳ ಬಗ್ಗೆ ತಾನು ಅಭಿಮಾನ ತಳೆಯಬಹುದು ಎನಿಸಿತು ಮೃದುಲಾಬೆನ್‌ಗೆ. ಮುಂಬಯಿಯ ಬಸಿರಿನಿಂದ ಬಲು ದೂರ ಕಿಷ್ಕಿಂಧೆ. ಸಾವಿರ ಸುಳ್ಳು ಹೇಳಬಹುದು. ಅದು ಹಾಗಲ್ಲ ಹೀಗೆ ಎಂದು ಬೊಟ್ಟು ಮಾಡಿ ತೋರುವವರು ಯಾರಿದ್ದಾರೆ ಇಲ್ಲಿ ?
“ಎರಡು ವರ್ಷಗಳಲ್ಲೇ ಇಪ್ಪತ್ತು ಜಿಲ್ಲಾ ಕೇಂದ್ರಗಳಲ್ಲಿ ಇಪ್ಪತ್ತು ಅನಾಥಾ ಶ್ರಮಗಳನ್ನು ಸ್ಥಾಪಿಸಿದೆ.”
“ಭೇಷಕ್.” ಮನಸ್ಸಿನಲ್ಲೆ 'ಇಷ್ಟು ಮಾಡಿಸಲು ಎಷ್ಟು ಜನರಿಗೆ ಸೆರಗು ಹಾಸಿದಳೊ?'
“ಕಲ್ಯಾಣನಗರದಲ್ಲಿ ಕೇಂದ್ರ ಅನಾಥಾಶ್ರಮ. ಹೊರನಾಡಿನಿಂದ ಬಂದವಳೂಂತ ಒಂದು ಕಷ್ಟ ಕೊಟ್ಟರಪ್ಪಾ.”
“ಸಹಜ. ರಾಷ್ಟ್ರೀಯ ಭಾವೈಕ್ಯದ ಮುಖವಾಡದ ಕೆಳಗೆ ಆಗದವರ ವಿರುದ್ಧ ಹಲ್ಲುಮಸತ.”
“ಜೀವ ತೇದು ನಿಧಿ ಸಂಗ್ರಹಿಸಿದೆ. ಮೊನ್ನೆಯಷ್ಟೆ ಮೂರು ಮಹಡಿ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿಸಿದೆ.”
“ಕೋನಶಿಲೆ ಯಾರಿಟ್ಟರು?”
“ಪ್ರಧಾನಿಯನ್ನೆ ಕರೆಸಬೇಕೂಂತಿದ್ದೆ. ಆದರೆ ಅವರು ಕೊಟ್ಟ ದಿನಾಂಕಗಳು ನಮಗೆ ಸರಿ ಬೀಳಲಿಲ್ಲ. ಹೀಗಾಗಿ—”
“ಸಿ.ಎಂ.ನ್ನ ಕೇಳ್ದೆ, ಆಲ್ವಾ? ಏನು ಅವನ ಹೆಸರು—ಜಾಣಪ್ಪ ?”
“ಜಾಣಪ್ಪ ನಿಜವಾಗಿಯೂ ದಡ್ಡಪ್ಪ.”
ಪದಗಳ ಅರ್ಥವನ್ನು ಹಿಂದೂಸ್ಥಾನಿಯಲ್ಲಿ ತಿಳಿದು, ಮೃದುಲಾಬೆನ್ ನಕ್ಕಳು.
“ಈ ಕನ್ನಡ ಮಜಾಶೀರ ಭಾಷೆ....ಕಟ್ಟಡ ನಿನ್ನ ವಾಸ್ತವ್ಯಕ್ಕೊ?”
“ಅನಾಥಾಶ್ರಮಕ್ಕೆ. ಮಗ್ಗುಲಲ್ಲೆ ಗೆಸ್ಟ್ ಹೌಸ್ ಕಟ್ಟಿಸಿ, ಅದರಲ್ಲಿ ನಾನಿರ್ತೇನೆ.”