ಪುಟ:ಮಿಂಚು.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

157

ಬಂದ. ಆಕೆ ತನ್ನ ನೀಲಿ ನಕಾಶೆಗನುಗುಣವಾಗಿ ತನಗೆ ನೀಡಿದ ಸ್ಥಾನವನ್ನು ಆಯಾ
ಪುಷ್ಪಕುಂಡ ಸ್ವೀಕರಿಸಿತು.
ಚೆನ್ನೈ ಧರ್ಮಮಠಾಧೀಶರು ಕಲ್ಯಾಣನಗರಕ್ಕೆ ಬಂದು ಧರ್ಮಮಠದ
ಅಧಿಕಾರ ವಹಿಸಿಕೊಂಡುದು ದಿನ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಮುಖ್ಯಮಂತ್ರಿ
ಅದು ಪ್ರಕಟವಾದ ಸಂಜೆಯೇ ಮಠಕ್ಕೆ ಹೋಗಿ ಸ್ವಾಮಿಜಿಯ ಶುಭಾಶೀರ್ವಾದ
ಪಡೆದು ಬಂದರೆನ್ನುವುದು ಮತ್ತೆ ಅಚ್ಚಿನ ರೂಪ ತಳೆಯಿತು. ಆ ವಾರ್ತೆ ಓದಿದ
ಗಣ್ಯರು ಮಠಕ್ಕೆ ಬರತೊಡಗಿದರು. ಸಾಪ್ತಾಹಿಕಗಳಲ್ಲಿ ಸ್ವಾಮೀಜಿ ಮತ್ತು ಮಠದ
ಬಗ್ಗೆ ಸಚಿತ್ರ ಲೇಖನಗಳು ಬಂದುವು. ಒಂದರಲ್ಲಿ ಮರಿಸ್ವಾಮಿಯ ಚಿತ್ರವೂ ಇತ್ತು.
ಮಹಾಜನತೆಗೆ ಹಸಿರು ನಿಶಾನೆಯಾಯಿತು ಈ ಪ್ರಚಾರ, ಅವರು ನೂರುಗಟ್ಟೆಯಲ್ಲಿ
ಸಾವಿರಗಟ್ಟಲೆಯಲ್ಲಿ ಬಂದರು ದರ್ಶನಕ್ಕಾಗಿ, ಮಠದ ಎದುರುಗಡೆ ರಸ್ತೆಯಾಚೆಗೆ
ಒಂದು ಖಾಲಿ ನಿವೇಶನವಿತ್ತು. ಬಂಗ್ಲೆ ಸೈಟು, ಯಾರ ಪಾಲಿಗೋ ಬಂದದ್ದು.
ಕಟ್ಟಡ ಎದ್ದಿರಲಿಲ್ಲ. ಅಲ್ಲಿ ಷಾಮಿಯಾನ ಸಿದ್ಧವಾಯಿತು. ಮಳೆ ಬಂದರೂ ಹೆಚ್ಚು
ತೊಂದರೆಯಾಗದಷ್ಟು ಭದ್ರವಾದದ್ದು, ಪ್ರತಿ ಸಂಜೆ ಅಲ್ಲಿ ಸ್ವಾಮೀಜಿಯ ಪ್ರವಚನ.
ಅವರೆಡೆಗೆ ಬಂದ ವರ್ತಕರಲ್ಲಿ ಪ್ರಮುಖ, ಧನಂಜಯಕುಮಾರ.
ಮಠದ ಚಾಕರನಿಗೆ ವಯಸ್ಸು ಎಪ್ಪತ್ತು ಸಮೀಪಿಸಿದ್ದರೂ ಸುತ್ತಲೂ
ನಡೆಯುತ್ತಿದ್ದುದೆಲ್ಲ ಯೌವನದ ಹುಮ್ಮಸ್ಸುನೀಡಿತು. ಮುಖ್ಯಮಂತ್ರಿ ಬಂದಾಗ
ಅವರ ಪಾದರಕ್ಷೆಗಳನ್ನು ಎತ್ತಿ ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದ. ನಿದ್ದೆ ಹೋದ ಮೇಲೆ
ಮಾತ್ರ ಏನೋ ಸಂದೇಹ. ಹಿಂದಿನ ಸ್ವಾಮಿಜಿ ಇದ್ದಾಗ ಈಯಮ್ಮಣ್ಣಿ ಒಮ್ಮೆ
ಬಂದಿದ್ದರು. ಅದಕ್ಕೂ ಹತ್ತಾರು ತಿಂಗಳು ವರ್ಷಕ್ಕಿಂತ ಹೆಚ್ಚು ಹಿಂದೆ ಒಬ್ಬರು
ಅವ್ವ ಬಂದು ಮೂರು ನಾಲ್ಕು ತಿಂಗಳಿದ್ದರು, 'ಮುಖ್ಯಮಂತ್ರಿಯವರಿಗೂ ಆಕೆಗೂ
ಸ್ವಲ್ಪ ಹೋಲಿಕೆ ಇಲ್ಲವಾ ?' 'ಮುದುಕಪ್ಪ, ಇದು ಮಾಯೆ. ಸ್ವಾಮಿಯೋರು
ಅನ್ನೋದಿಲ್ವ ಅಂಥ ಮಾಯೆ, ಇನ್ನೂ ಯೋಚನೆ ಮಾಡಿದ್ರೆ ಉಚ್ಚು ಹಿಡಿದಾತು,
ಮನಿಕೊ....' ಎಂದು ತನಗೆ ತಾನೇ ಹಿತವಚನ ನುಡಿದ.
ಮಂಡಲದ ಎಲ್ಲ ನಕ್ಷತ್ರಗಳೂ ಮಠದಲ್ಲಿ ಚಕಚಕಿಸಿದ ಮೇಲೆ ಪ್ರತಿಪಕ್ಷದ
ಹಿರೇಮಣಿ ಮೊದಲಾದವರು ಬಂದರು. ಅತ್ತ ತಲೆ ಹಾಕದವನು ಸಮತಾಪಕ್ಷದ
ದಂಡಪಾಣಿ. “ಬಂಡವಾಳಶಾಹಿ ವ್ಯವಸ್ಥೆ ಕುಸೀತಿದೆ. ಆಸರೆಗಾಗಿ ಅದು ಸ್ವಾಮಿ
'ಗಳಿಗೆ ಬಾಬಾಗಳಿಗೆ ಆತುಕೊಳ್ತಿದೆ. ಮಂತ್ರಿಗಳೆಲ್ಲ ಅಲ್ಲಿಗೆ ಹೋಗೋದರ ಗುಟ್ಟೇನು?
ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಈ ಪ್ರಶ್ನೆ ಎತ್ತಬೇಕು,” ಎಂದು
ಪ್ರತಿಕ್ರಿಯೆ ವ್ಯಕ್ತಪಡಿಸಿದ.
ಮಠಕ್ಕೆ ತಿಜೋರಿ ಬಂತು. ಕಬ್ಬಿಣದ ಕಪಾಟುಗಳು ಬಂದುವು. ಹಗಲೊಬ್ಬ
ರಾತ್ರಯೊಬ್ಬ ಪೋಲೀಸ್ ಪೇದೆ ಅಲ್ಲಿ ಕಾವಲು ಕೆಲಸ ಮಾಡಿದ.
ರಂಗಧಾಮ್ ಸಿಕ್ಕಿದಾಗ ಸೌದಾಮಿನಿ ಕೇಳಿದಳು :