ಪುಟ:ಮಿಂಚು.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

138

ಮಿಂಚು

“ಏನಂದರು ಸ್ವಾಮೀಜಿ ?”
“ವಿದೇಶ ಪ್ರವಾಸ ಹೋಗಿದ್ದೇನೆ ಅಂದೆ. 'ಕಾರ್ಯ ಫಲಿಸ್ತದೆ ; ಹೋಗಿ.
ಬನ್ನಿ ' ಅಂದ್ರು.”
“ಸಮಾಜದ ಆರೋಗ್ಯಕ್ಕೆ ಮಂದಿರ ಮಸೀದಿ ಇಗರ್ಜಿ ಗುರುದ್ವಾರ ಹೇಗೆ
ಅಗತ್ಯವೋ ಹಾಗೆಯೇ ಮಠ. ಸ್ವಾಮೀಜಿ ಹೇಳಿದ ಮಾತು ಸುಳ್ಳಾಗುವದಿಲ್ಲ.
ವಿಜಯಶ್ರೀ ನಿಮ್ಮ ಕೊರಳಿಗೆ ಮಾಲೆ ಹಾಕ್ತಾಳೆ.”
“ಥ್ಯಾಂಕ್ಸ್, ಮಾತಾಜಿ.”
“ನೀವು ವಿದೇಶದಲ್ಲಿರುವಾಗ ನಾಟ್ಯ ಮಂದಿರದಲ್ಲಿ ಒಂದು ಭಾರೀ ಕಾರ್ಯಕ್ರಮ
ನಡೀತದೆ. ಹುಡುಗಿಯರ ದೊಡ್ಡ ತಂಡವೇ ಬರ್ತದೆ.”
“ಪತ್ರಿಕೆಯಲ್ಲಿ ವಿವರ ಬಂದಿತ್ತು.”
“ಭಾರತಿ ಅನಾಥಾಶ್ರಮ ಪ್ರತಿಷ್ಠಾನದವರು ಬರ್ತಾರೆ.”
“ಅಲ್ಲಿಯೂ ಇರಬೇಕು ಇಲ್ಲಿಯೂ ಇರಬೇಕು ಅಂದರೆ ಹ್ಯಾಗಾಗುತ್ತೆ ?
ನನಗೆ ಅದೃಷ್ಟವಿಲ್ಲ.”
“ನಿಮ್ಮಂಥ ಅದೃಷ್ಟವಂತ ಬೇರೆ ಯಾರಿದ್ದಾರೆ ರಂಗಧಾಮ್ ?”
ಮುಖ್ಯಮಂತ್ರಿಯ ದೃಷ್ಟಿ ಅವನ ಮೇಲೆಲ್ಲ ಹರಿದಾಡತೊಡಗಿತ್ತು. ಆತ
ಅಲ್ಲಿಂದ ಎದ್ದ.
ರಂಗಧಾಮ್ ವಿದ್ಯುಚ್ಛಕ್ತಿ ನಿಗಮದ ಅಧ್ಯಕ್ಷನನ್ನು ಕರೆದುಕೊಂಡು ದಿಲ್ಲಿಗೆ
ಹೊರಟ. ಅಲ್ಲಿಂದ ಫ್ರಾಂಕ್‌ಫರ್ಟಿಗೆ,
ಅವರಿಬ್ಬರು ಕಲ್ಯಾಣನಗರ ಬಿಟ್ಟ ದಿನ, ಮೃದುಲಾಬೆನ್ ತಂಡ ಬಂದಿಳಿಯಿತು.
ಸಂಜೆ ರೈಲು ನಿಲ್ದಾಣದಲ್ಲಿ ಮುಖ್ಯಮಂತ್ರಿಯ ನೇತೃತ್ವದಲ್ಲಿ ಸ್ವಾಗತ. ಸೌದಾಮಿನಿ
ಮತ್ತು ಪ್ರತಿಷ್ಠಾನದ ಅಧ್ಯಕ್ಷೆ ಪರಸ್ಪರ ತಬ್ಬಿಕೊಂಡ ಚಿತ್ರ ಪತ್ರಿಕೆಗಳ ಮುಖಪುಟಕ್ಕೆ
ಅಲಂಕಾರವಾಯಿತು. ಶಾಸಕರ ಭವನದ ಹದಿನೈದು ಕೊಠಡಿಗಳು ಕಲಾತಂಡವನ್ನು
ಬರಮಾಡಿಕೊಂಡುವು. ಕಾರ್ಯದರ್ಶಿನಿ ಕರುಣಾ ತಂಡದ ಜತೆಯಲ್ಲಿ ಉಳಿದಳು.
ಮದುಲಾಬೆನ್ ಜುಮ್ಮಿಯೊಂದಿಗೆ ಸೌದಾಮಿನಿ ನಿವಾಸದ ಅತಿಥಿಯಾದಳು.
ಓಡಾಟದ ವಾಸ್ತವ್ಯದ ಮೇಲುಸ್ತುವಾರಿಯನ್ನು ವಿಶೇಷಾಧಿಕಾರಿ ರಾಮರಾಜು
ನಿರ್ವಹಿಸಿದ.
ಮುಖ್ಯಮಂತ್ರಿಯ ಖಾಸಾ ಕೊಠಡಿಯಲ್ಲಿ ಸುಖಾಸೀನಳಾದ ಮೃದುಲಾ ಬಿಸಿ
ಕಾಫಿ ಕುಡಿದಳು.ಬೆರಗುಗಣ್ಣುಗಳು ಅತ್ತಿತ್ತ ಓಡಾಡಿದುವು. ಮಾತೇ ಇಲ್ಲವಲ್ಲ