ಪುಟ:ಮಿಂಚು.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮಿಂಚು

159

ಎಂದು ಸೌದಾಮಿನಿ ವಿಸ್ಮಿತೆ. ಹಲವು ಮಿನಿಟುಗಳ ಮೌನದ ಬಳಿಕ ಮೃದುಲಾ
ಕೇಳಿದಳು ; “ಅಲ್ಲ ಪುಟ್__ಕ್ಷಮಿಸು__ಸೌದಾ....ಇದು ಕನಸೋ ? ಎಚ್ಚರವೊ?"
“ಚಿವುಟಿ ನೋಡಿಕೊಂಡಿರಾ ದೀದಿಜಿ? ಒಮ್ಮೊಮ್ಮೆ ನನಗೂ ಅನಿಸೋದುಂಟು
ಇದೆಲ್ಲ ನಿಜ ತಾನೆ?-ಅಂತ.”
ಎಲ್ಲೋ ಫೋನ್ ಧ್ವನಿಸುತ್ತಿತು. ಪರಶುರಾಮ ಚುಟುಕು ಉತ್ತರವಿತ್ತು
ಆ ಉಪಕರಣಕ್ಕೆ ವಿರಾಮ ನೀಡುತ್ತಿದ್ದ. ಇಂಟರ್‍ಕಾಮ್‍ನಲ್ಲಿ ಮುಖ್ಯಮಂತ್ರಿ
ಆದೇಶವಿತ್ತಳು :
“ಪರಶುರಾಮ್, ರಾಮರಾಜು ಜತೆ ನೀನೂ ಇರು. ಡಿಲಕ್ಸ್ ಕೋಚ್ ಸಿದ್ಧ
ಮಾಡಿದೀಯಲ್ಲ? ನಾಳೆ ಪೂರ್ವಾಹ್ನ ನಾಟ್ಯಮಂದಿರ ತೋರಿಸು, ನಾಲ್ಕು ಗಂಟೆಗೆ
ಮಠಕ್ಕೆ ಕರಕೊಂಡು ಹೋಗು. ಅಷ್ಟು ಹೊತ್ತಿಗೆ ಸ್ವಾಮಿಾಜಿ ನಿದ್ದೆಯಿಂದ
ಎದ್ದಿರ್ತಾ‍ರೆ. ಆಶೀರ್ವಚನ ಪಡಕೊಂಡು ಅನಾಥಾಶ್ರಮಕ್ಕೆ ಭೇಟಿ. ಕಾರ್ಯಕ್ರಮವಾದ
ಮರುದಿನ ನಗರದ ಸುತ್ತುಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಸಂದರ್ಶನ; ಆ ರಾತ್ರೆ
ಮರುಪ್ರಯಾಣ. ಕಂಪಾರ್ಟ್‍ಮೆಂಟ್ ರಿಸರ್ವ್ ಮಾಡಿಸು.”
“ಇದೇ ಬಂದಿದ್ದೇವೆ. ಆಗಲೇ ಹೊರಡಿಸೋ ಯೋಚನೇನೂ
ಮಾಡ್ತಿದೀಯಾ ?"
“ಈ ಮೂರು ದಿನ ನಿಮಗೋಸ್ಕರ. ಬೇರೆ ಯಾವ ಕೆಲಸವನ್ನೂ ಮಾಡೋದಿಲ್ಲ.
ದಿಲ್ಲಿಯಿಂದ ಪ್ರಧಾನಿಯವರ ಕರೆ ಬಂದಿತು. ಮುಂದಿನ ತಿಂಗಳು ಬರ್ತೇನೆ__ಅಂತ
ಹೇಳಿಬಿಟ್ಟೆ. ರಾಜಕಾರ್ಯ. ಪ್ರತಿ ದಿನವೂ ಪ್ರತಿ ಕ್ಷಣವೂ ಸಾವಿರ ವಿಷಯಗಳ
ಮೇಲೆ ಕಣ್ಣಿಟ್ಟಿರ್ಬೇಕು.”
“ಗೊತ್ತು, ಸೌದಾ.”
“ಮುಂದೆ ಯಾವತ್ತಾದರೂ ಬಂದು ಒಂದೆರಡು ವಾರ ಇದ್ದು ಹೋಗುವಿರಂತೆ.
ಇದು ನಿಮ್ಮದೇ ಮನೆ ಇದ್ದ ಹಾಗೆ. ಆದರೆ ನೀವು ಪ್ರತಿಷ್ಠ‍ನಾದ ದೊಡ್ಡ ಭಾರ
ಹೊತ್ತುಕೊಂಡಿದೀರಿ. ನಿಮಗಾದರೂ ಬಿಡುವು ಎಲ್ಲಿ ಸಿಗುತ್ತೆ ?"
“ಇನ್ನೊಂದು ವರ್ಷದೊಳಗಾದರೂ ಸಂಗ್ರಹಕಾರ್ಯ ಪೂರ್ತಿಯಾಗ್ಬೇಕು.
ಆಮೇಲೆ ಕೇಂದ್ರಗಳ ಸಂಘಟನೆ.”
“ನಾಳೆ ನನ್ನ ಅನಾಥಾಶ್ರಮ ನೋಡುವಿರಂತೆ. ಕಿಷ್ಕಿಂಧೆಯ ಮಟ್ಟಿಗೆ ಅದನ್ನೇ
ಪ್ರತಿಷ್ಠಾನದ ಅಧೀನ ಸಂಸ್ಥೆ ಮಾಡ್ಕೊಳ್ಳಿ.”
ಕಿಷ್ಕಿಂಧೆಯ ಕಾಣಿಕೆ ಎಷ್ಟು ಎಂದು ಕೇಳಲು ಬಾಯಿ ತೆರೆದ ಮೃದುಲಾಬೆನ್,
ಇದು ಈಗ ಕೇಳುವ ಪ್ರಶ್ನೆಯಲ್ಲ_ಎಂದು ಸುಮ್ಮನಾದಳು.
"ಒಂದು ಪುಟ್ಟ ಸ್ನಾನ ಮಾಡಿ. ಪ್ರಯಾಣದ ಆಯಾಸ ಪರಿಹಾರವಾಗುತ್ತೆ.”
“ಹ್ಞ.”