ಪುಟ:ಮಿಂಚು.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

167

ಚಪ್ಪಾಳೆ. ಒಳತೆರೆ ಅಡ್ಡವಾಯಿತು. ತೆರೆಯೊಳಗಿನ ಗಂಟಲು "ಇನ್ನು ಕಾಮ ದಹನ”
ಎಂದೊಡನೆ ತೆರೆ ಸರಿಯಿತು. ಕುಸುಮ ಶರ ಕಾಮಣ್ಣ ಹುಚ್ಚಾಟಕ್ಕಿಳಿದ, ಶಿವನನ್ನು
ಕೆಣಕಿದ, ಬೂದಿಬಡಕ ಮುಕ್ಕಣ್ಣ ಸಿಟ್ಟಾದ.... ಈ ದೇಶದಲ್ಲಿ ಯಾರಿಗೆ ಗೊತ್ತಿಲ್ಲ
ಈ ಕಥೆ ? ಈಗ ಹಿಮ್ಮೇಳದವರಿಗೆ ಮೇಲುಗೈ. ಯಾರು ಹಾಕಿದರೊ ಫಾಲನೇತ್ರದ
ಸ್ವಿಚ್ಚನ್ನು. ಕಾಮಣ್ಣ ಉರಿದು ಹೋದ. ಇನ್ನು ರತಿದೇವಿಯ ಪ್ರಾರ್ಥನೆ, ಅವಳ
ಗಂಡ ಫೀನಿಕ್ಸ್ ಆಗಬೇಕು. ತಾಳಿ, ಈ ಉಪಸಂಹಾರಕ್ಕೆ ಮೊದಲು ಭಾಷಣಗಳು
ಇತ್ಯಾದಿ. ಒಳತೆರೆ ರಂಗಸ್ಥಲದ ಬಹ್ವಂಶವನ್ನು ಮರೆಮಾಡಿತು.
ಸುಲೋಚನಾಬಾಯಿ ರಾಜ್ಯಪಾಲರನ್ನೂ ಮುಖ್ಯಮಂತ್ರಿಯನ್ನೂ ಕರೆ
ದೊಯ್ದಳು. ಮೃದುಲಾ ಹಿಂಬಾಲಿಸಿ ಬಂದಳು. “ಪೀಠಗಳು ಬೇಡ, ನಿಂತು
ಮಾತಾಡೋಣ,” ಎಂದರು ರಾಜ್ಯಪಾಲರು.
ಮೆಚ್ಚುಗೆ,ಪ್ರಶಂಸೆ. ಪ್ರತಿಷ್ಟಾನದ ಹಿರಿಯ ಉದ್ದೇಶ ಕೈಗೂಡಲೆಂಬ
ಶುಭಾಶಯ. ಟಿಕೆಟ್ ಮಾರಾಟದಿಂದ ಸಂಗ್ರಹವಾದ ಒಂದು ಲಕ್ಷ ರೂಪಾಯಿ ಅರ್ಪಣೆ
ಮೃದುಲಾಬೆನ್‌ಗೆ. ಮುಖ್ಯಮಂತ್ರಿ ಎರಡು ಮಾತು ಹೇಳಿ, ನೇಪಥ್ಯದಲ್ಲಿದ್ದ
ಪರಶುರಾಮನಿಗೆ ಸನ್ನೆ ಮಾಡಿದಳು. ಆತ ಶ್ರೀಗಂಧದ ಕರಂಡಕದೊಡನೆ ಬಂದ.
ಸೌದಾಮಿನಿ ಅದನ್ನು ಮೃದುಲಾಗೆ ಒಪ್ಪಿಸಿದಳು.
ಕಲಾವಿದರಿಗೆ ಕಿರುಕಾಣಿಕೆ. “ಧನಂಜಯಕುಮಾರರನ್ನು ಕರೀರಿ.”
ಆತ ಆಗಲೇ ರಂಗಸ್ಥಲವನ್ನೇರುವ ಪಾವಟಿಗೆಗಳ ಮೇಲಿದ್ದ, ಮೂವರು
ಮಕ್ಕಳಿಗೆ “ಬನ್ನೋ” ಎಂದ. ಕಿರಿಯರು ರಟ್ಟಿನ ಪೆಟ್ಟಿಗೆಗಳನ್ನು ರಂಗಸ್ಥಲಕ್ಕೆ
ಒಯ್ದರು.
“ಪ್ರತಿಷ್ಠಾನದ ಕಲಾವಿದೆಯರಿಗೆ ಕಲಾವಿದರಿಗೆ ಕಿಷ್ಕಿಂಧೆಯ ಕಿರುಕಾಣಿಕೆ,
ರೇಷ್ಮೆ ಸೀರೆ, ಬಟ್ಟೆ !”
ರಾಜ್ಯಪಾಲರು 'ಪೀಠಗಳು ಬೇಡ' ಎಂದದ್ದು ತಪ್ಪಾಯಿತೆಂದು, ಬರತೊಡಗಿದ
ತಂಡದವರಿಗೆ “ನಮಸ್ತೆ” ಎಂದು, ಮೆಲ್ಲನೆ ಕೆಳಕ್ಕಿಳಿದು ಪತ್ನಿಯ ಪಕ್ಕದಲ್ಲಿ ಕುಳಿತರು.
(ಮೃದುಲಾ ಕರುಣಾಬೆನ್‌ಳನ್ನು ನೇಪಥ್ಯದಿಂದೀಚೆಗೆ ಬರ ಹೇಳಿ ತನ್ನ
ಕೈಯಲ್ಲಿದ್ದ ಕರಂಡಕವನ್ನು ಕೊಟ್ಟಳು.)
ಧನಂಜಯ ಕೊಟ್ಟ ಒಂದೊಂದೇ ಪ್ಯಾಕೆಟನ್ನು ಸೌದಾಮಿನಿ ಆಯಾ ಕಲಾವಿದರ
ಹೆಸರು ಹಿಡಿದು ಕರೆದುಕೊಟ್ಟಳು.
ಮೃದುಲಾಬೆನ್ ಹಿಂದಿಯಲ್ಲಿ ಮಾತನಾಡಿ “ಧನ್ಯವಾದ ಸಲ್ಲಿಸಿದಳು__ರಾಜ್ಯ
ಪಾಲರಿಗೆ, ಮುಖ್ಯಮಂತ್ರಿಗೆ, ಕಲ್ಯಾಣನಗರದ ಮಹಾಜನತೆಗೆ, ನೆರವು ನೀಡಿದ
ಸಂಗೀತಗಾರರಿಗೆ, ವಾದಕರಿಗೆ, ಉಳಿದೆಲ್ಲರಿಗೆ...... “ಈ ದಿನವನ್ನು ನಾವೆಂದೂ
ಮರೆಯುವುದಿಲ್ಲ.”