ಪುಟ:ಮಿಂಚು.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

205

ಇದನ್ನು ಹತ್ತಿಕ್ಕೋದು ನಿಮಿಷದ ಕೆಲಸ. ಆದರೆ, ಪ್ರಜಾಪ್ರಭುತ್ವಕ್ಕೆ ನಾವು
ಅಪಚಾರ ಮಾಡ್ತಿದೇವೆ ಅಂತ ಯಾರೂ ಭಾವಿಸಬಾರದಲ್ಲ ?....”
ಇದೇ ಸರಣಿಯಲ್ಲಿ ಮಾತು ಮುಂದುವರಿಯಿತು, ಮಧ್ಯೆ ವಿದ್ಯಾಧರ ಎದ್ದು
ಬಂದು ಸೌದಾಮಿನಿಯ ಕಿವಿಯಲ್ಲಿ ಪಿಸುನುಡಿ ಆಡಿದ,
ಮುಖ್ಯಮಂತ್ರಿ :
“ವಿದ್ಯಾಧರರು ಹೇಳಿದ ಗುಟ್ಟಿನ ಮಾತನ್ನು ಈಗ ರಟ್ಟು ಮಾಡ್ತೇನೆ. ಕೇಳಿ !
ನಮ್ಮ ಜತೆ ಈಗ ನೂರೈದು ಜನ ಇದ್ದಾರೆ. ಪರ ಊರುಗಳಿಂದ ಇನ್ನೂ ಇಪ್ಪತ್ತೈದು
ಶಾಸಕರು ಬರಬೇಕಾಗಿದೆ. ಅವರೂ ಸೇರಿಕೊಂಡಾಗ ನಮ್ಮ ಬಲ ಎಷ್ಟಾಗ್ತದೆ
ಅನ್ನೋದನ್ನು ನೀವೇ ಲೆಕ್ಕ ಹಾಕ್ಕೊಳ್ಳಿ. ಕುತಂತ್ರದಿಂದ ಸಂಪುಟ ಉರುಳಿಸೋದಕ್ಕೆ
ಆಗೋದಿಲ್ಲ. ತಿಪ್ಪರಲಾಗ ಹಾಕಿದರೂ ಆಗೋದಿಲ್ಲ. ಇದು ಪಕ್ಷದ್ರೋಹ. ತಕ್ಕ
ಫಲವನ್ನು ಅವರು ಅನುಭವಿಸಿಯೇ ಅನುಭವಿಸ್ತಾರೆ.”
ನೆರೆದಿದ್ದವರು ಚಪ್ಪಾಳೆ ತಟ್ಟಿದರು.
ವಿಶ್ವಂಭರನ ಉಪಾಹಾರ (ಚಪ್ಪರ, ಹೂವಿನಕುಚ್ಚು, ಎಲ್ಲ) 'ಅರಿಕೇಸರಿ',
ಹೋಟೆಲಿನದು.
ಸ್ಪೀಕರ್‌ ಇಲ್ಲಿಯೂ ಮಾತನಾಡದ ಅಧ್ಯಕ್ಷರಾದರು. ವಿಶ್ವಂಭರ ಧ್ವನಿವರ್ಧಕ
ವನ್ನು ಚಾಕಚಕ್ಯದಿಂದ ಬಳಸಿದ. ಸೌದಾಮಿನಿ ಪುರಾಣ ಶ್ರೋತೃಗಳಿಗೆ ರಂಜನೆ
ನೀಡಿತು. ಆಗಾಗ್ಗೆ ಚಪ್ಪಾಳೆಗಳು ಬಿದ್ದುವು.
ಆತನೆಂದ :
“ಇನ್ನು ಗಣಿತಕ್ಕೆ ಬರೋಣ. ವಿಧಾನಸಭಾಪತಿ ಪೀಠದಲ್ಲಿ ಕುಳಿತಾಗ ಅವರು
ಸ್ಪೀಕರ್. ಆಗ ಅವರು ಅಗತ್ಯ ಬಿದ್ದಾಗ ತಮ್ಮ ಮತ ಕೂಡ ಚಲಾಯಿಸಬಹುದು.
ಈಗ ಮಾನ್ಯ ಶಾಸಕರಾಗಿ ಹಿರಿಯ ರಾಜಕೀಯ ಮುತ್ಸದ್ದಿಯಾಗಿ ನಮ್ಮ ಲೆಕ್ಕ
ಕ್ಕಿದ್ದಾರೆ. ಸಾದಾಮಿನಿ ಯಾನೆ ಮಾತಾಜಿ ಯಾನೆ ಬೇರೆ ಬೇರೆ ಹೆಸರುಗಳಿರುವ
ಮುಖ್ಯಮಂತ್ರಿಯಲ್ಲಿ, ಅವರ ನಾಯಕತ್ವದಲ್ಲಿ ತಮಗೆ ವಿಶ್ವಾಸವಿಲ್ಲಾಂತ ಒಟ್ಟು
ಎಂಬತ್ತು ಶಾಸಕರು ಇಗೋ ಈ ಹಾಳೆಗಳಲ್ಲಿ ಸಹಿ ಹಾಕಿದ್ದಾರೆ. ಎಲ್ಲ ಪಕ್ಷಗಳವರೂ
ಸೇರಿ ಕಿಷ್ಕಿಂಧೆಯಲ್ಲಿ ಚುನಾಯಿತ ಪ್ರತಿನಿಧಿಗಳ ಒಟ್ಟು ಸಂಖ್ಯೆ ೧೬೧. ಅವರಲ್ಲಿ
ಒಬ್ಬರು ಸಮತಾಪಕ್ಷದವರು, ಐವರು ಪ್ರಜಾಪಕ್ಷದವರು. ಉಳಿದವರೆಲ್ಲ ರಾಷ್ಟ್ರ
ಪಕ್ಷದವರು, ೧೬೧ ರಿಂದ ೬ ಹೋದರೆ ಉಳಿದವರು ೧೫೫. ಅವರಿಂದ ೮೦ ಸಹಿ
ಕಾರರನ್ನು ಇತ್ತ ಇಡಿ. ಮುಖ್ಯಮಂತ್ರಿಯವರ ಕಡೆ ಉಳಿಯುವವರು ಎಪ್ಪತ್ತೈದೇ
ಜನ. ಪ್ರತಿಪಕ್ಷೀಯರನ್ನು ಬಿಡಿ ; ಆಡಳಿತ ಪಕ್ಷದಲ್ಲಿ ಈಗ ಮಾತಾಜಿಗೆ ಬಹುಮತ
ವಿಲ್ಲ. ಅವರು ರಾಜೀನಾಮೆ ಕೊಡಬೇಕು. ಇಲ್ಲವೆ ಬರ್ತರ್ಫ್ ಮಾಡಿಸಿಕೊಳ್ಳಲು
ಸೆರಗು ಬಿಗಿದುಕೊಳ್ಳಬೇಕು. (“ಹೀಯರ್ !” “ಹೀಯರ್ !”).