ಪುಟ:ಮಿಂಚು.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮಾರನೆಯ ಬೆಳಗ್ಗೆ ಎದುರು ಫ್ಲ್ಯಾಟಿನ ಬಾಗಿಲ ಗುಂಡಿಯೊತ್ತಿ ಮೃದುಲಾ ಬೆನ್ “ತೊಂದರೆ ಕೊಡ್ತೀನಿ, ಕ್ಷಮಿಸಿ,” ಎಂದು ರಾಗವೆಳೆದಳು.

“ಯಾರು?” ಎಂದಿತೊಂದು ಗೊಗ್ಗರ ಧ್ವನಿ ಫೋನಿನ ಇನ್ನೊಂದು ಕೊನೆಯಿಂದ.

"ವಿನೋದ್? "

“‍ಹ್ಞ.”

“ನಾನು ಮೃದುಲಾ."

“ರಾತ್ರಿ ಡ್ಯೂಟಿಯಿತ್ತು, ನಿದ್ರೆ ಕೆಡಿಸಿದಿರಿ."

“ಪುನಃ ಮಲಗ್ವೇಡ. ಬ್ರೇಕ್‍ಫಾಸ್ಟಿಗೆ ಇಲ್ಲಿಗೇ ಬಾ, ಸ್ವಲ್ಪ ಅರ್ಜೆಂಟ್ ಕೆಲಸ ಇದೆ ‍."

"ಸಂಜೆ ಬಂದರೆ ಸಾಲದಾ? "

“ಈಗಲೇ ಬಾ ವಿನೋದ್, ಪ್ಲೀಸ್."

“ಇನ್ನು ಹತ್ತು ಮಿನಿಟ್ನಲ್ಲಿ ಹೊರಟೆ, ಬ್ರೇಕ್‌ಫಾಸ್ಟ್ ಮರೀಬೇಡಿ.”

“ಟ್ಯಾಕ್ಸೀಲಿ ಬಾ. ಬಾಡಿಗೆ ನನ್ನ ಲೆಕ್ಕಕ್ಕೆ.”

ರಿಸೀವರ್ ಕೆಳಗಿಟ್ಟ ಸದ್ದು. ಫ್ಲ್ಯಾಟ್ ನಿವಾಸಿಗಳು ಬಿಹಾರಿನ ಪಾಂಡೆ ದಂಪತಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಾಂಡೆ ಅಧಿಕಾರಿ. ಅದು ಬ್ಯಾಂಕಿನ ಫೋನು. ಬಿಲ್ ಸಂದಾಯದ ತೊಂದರೆ ಇರಲಿಲ್ಲ. ಆದರೂ ಶ್ರೀಮತಿ ಪಾಂಡೆ ಗೊಣಗಿದ್ದಳು: “ಆ ಹೆಂಗಸಿನ ನಡತೆ ಒಂದು ಥರಾ ಇದೆ ಅಂದ್ರೆ,” ಆತ ಹೇಳಿದ್ದ: “ನೀನು ಅಸೂಯೆ ಪಡುವಂಥದು ಅವಳಲ್ಲಿ ಏನೂ ಇಲ್ಲ. ವಾರಕ್ಕೆ ಒಂದೆರಡು ಸಲ ಪರವಾಗಿಲ್ಲ ಅಂತ ಸೂಚನೆ ಕೊಡು, ಪ್ರಭಾವಶಾಲೀ ಹೆಂಗಸು. ಸ್ನೇಹವೂ ಬೇಡ, ವೈರವೂ ಬೇಡ.”

ಒಂದು ವಾರ ಬಿಟ್ಟು ಶ್ರೀಮತಿ ಪಾಂಡೆ ಹೇಳಿಯೇಬಿಟ್ಟಳು:

“ಹೋದ ಕ್ವಾರ್ಟರಿನ ಬಿಲ್ಲು ಭಾರಿ ಅಂತ ಆಡಿಟ್ ಆಕ್ಷೇಪ ಬಂತಂತೆ. ವಾರ ಕ್ಕೊಮ್ಮೆ ಎರಡು ಸಲ ಪರವಾಗಿಲ್ಲ ಬಹೆನ್‍ಜಿ.”

ಭಾರಿ ಬಿಲ್ಲಿಗೆ ಕಾರಣ ಬಿಹಾರಿನ ಬಂಧುಗಳಿಗೆ ಇಲ್ಲಿಂದ ಪದೇ ಪದೇ ಮಾಡುತ್ರಿದ್ದ ಟ್ರಂಕ್ ಕಾಲು.