ಪುಟ:ಮಿಂಚು.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 221
ಗುಪ್ತಚಾರ ದಳದ ಮುಖ್ಯಸ್ಥ ಮೆಚ್ಚುಗೆಯ ನಗೆ ಸೂಸಿದ.ಸೌದಾಮಿನಿ
ಅಂದಳು :
“ಹಸ್ತ ಸಾಮುದ್ರಿಕ ಜ್ಯೋತಿಷ್ಯ ಏನಾದರೂ ಬರುತ್ತ ನಿಮಗೆ ?”
“ಇಲ್ಲ ಮಾತಾಜಿ.”
“ನಿಮ್ಮ ಉದ್ಯೋಗಕ್ಕೂ ಆ ಕಸಬುಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಇದು
ಜೋಕು. ನಗೋದಿಲ್ಲವೆ ?”
ಇಬ್ಬರೂ ನಕ್ಕರು.
“ನಾಡದು ಮಧ್ಯಾಹ್ನ ಇಷ್ಟು ಹೊತ್ತಿಗೆ ಗಂಡೋ ಹೆಣ್ಣೂ ಗೊತ್ತಾಗುತ್ತೆ.”
“ನಾನು ಸರಕಾರಿ ಅಧಿಕಾರಿ, ಪಕ್ಷ ವಹಿಸಬಾರದು.”
“ಒಳ್ಳೇದು. ವಿಶೇಷವೇನಾದರೂ ಇದ್ದರೆ ಭೇಟಿಗೆ ಬನ್ನಿ.”
“ಏನಾದರೂ ಪ್ರಮಾದ ನನ್ನಿಂದ ನಡೆದಿದ್ದರೆ ಕ್ಷಮೆ ಇರಲಿ.”
“ಆಮೋದ ಪ್ರಮೋದ ಯಾವುದೂ ಇಲ್ಲ.ನೀವು ಶಿಷ್ಟ ನಡವಳಿಕೆಯ
ಮನುಷ್ಯ, ನಿಮಗೆ ಒಳ್ಳೆಯದಾಗಲಿ.”
ಮುಖ್ಯಸ್ಥ ಎದ್ದು ಹೊರಬಿದ್ದ.
ಪರಶುರಾಮನ ಆಗಮನವಾಯಿತು. ಫೋನ್ ಬಾರಿಸತೊಡಗಿತು.
“ಮಾತಾಜಿ, ಐ.ಜಿ.ಪಿ.
“ಬಂದರಾ ?”
“ಇಲ್ಲ. ಅವರ ಪತ್ನಿ ಫೋನ್ ಮಾಡಿದಾರೆ.”
“ಏನಂತೆ ?”
“ಒಂದು ವಿನಂತಿ ಮಾಡ್ತಿದಾರೆ. ಭಾನುವಾರ ಬೆಳಗ್ಗೆ ಅನಾಥಾಶ್ರಮದ ಅತಿಥಿ
ಗೃಹದ ಉದ್ಘಾಟನೆಗೆ ತಾವು ಒಪ್ಪಬೇಕಂತೆ. ಅವಸರದ ಏರ್ಪಾಟು. ಆಮಂತ್ರಣ
ಪತ್ರಿಕೆ ಇವತ್ತು ರಾತ್ರಿ ಅಚ್ಚಾಗಿ ನಾಳೆಯೆಲ್ಲ ವಿತರಣೆ ಆಗದಂತೆ, ಔಪಚಾರಿಕವಾಗಿ
ಅಮಂತ್ರಿಸೋದಕ್ಕೆ ಈಗ ಬರಬಹುದೆ ಅಂತ____”
ಭಾನುವಾರ ಮುಖ್ಯಮಂತ್ರಿಯ ಕಾಠ್ಯಕ್ರಮ ! ಸೌದಾಮಿನಿಗೆ ನಗೆ ಬಂತು,
ಖುಶಿಯೂ ಆಯಿತು.
“ಒಪ್ಪಿದ್ದೇನೆ ಅಂತ ಹೇಳು,ನಾಳೆ ಬೆಳಗ್ಗೆ ಹತ್ತಿಪ್ಪತ್ತು ಆಮಂತ್ರಣದ ಪ್ರತಿ
ಗಳನ್ನು ತಗೊಂಡು ಐ.ಜಿ.ಪಿ. ಪತ್ನಿಯೂ ಸುಲೋಚನಾಬಾಯಿಯೂ ಉಪಾಹಾರಕ್ಕೆ
ಬರಲಿ. ವಿತರಣೆಗೆ ದೂತರ ಸಹಾಯವೇನಾದರೂ ಬೇಕೆ ಕೇಳು. ನಮ್ಮ ದೂತರ
ಮೂಲಕ ಏರ್ಪಡಿಸಬಹುದು. ಒಂದು ಸಾವಿರ ಮುದ್ರಿಸಲಿ.”
ಅವನು ಅವರಿಗೆ ತಿಳಿಸಿದ. ಮಾತಾಜಿಗೆ ವರದಿ ಸಲ್ಲಿಸಿದ.
“ಧನ್ಯವಾದ ಧನ್ಯವಾದ ಅಂತ ಅವರಿಬ್ಬರೂ ನಾಲ್ಕಾರು ಸಲ ಹೇಳಿದರು.
ನಾಳೆ ಬೆಳಗ್ಗೆ ಬಾರಂತೆ.