ಪುಟ:ಮಿಂಚು.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

230 ಮಿಂಚು

"ಇವತ್ತು ನಾಳೆ ಆಗೋದಿಲ್ಲ. ಸೋಮವಾರ ನಾಲ್ಕು ಗಂಟೆಗೆ ಕಾರ್ಯ ಸೌಧಕ್ಕೆ ಬನ್ನಿ."

"ವ್ಯವಹಾರ ಮುಗಿಸಿ ಈ ರಾತ್ರೆಯೇ ಊರಿಗೆ ವಾಪಸಾಗೋಣಾಂತಿದ್ವಿ."

"ಕುದುರೆ ಮೇಲೆ ಕೂತೇ ಇದ್ದೀರಲ್ಲ. ವಿಶ್ರಾಂತಿ ತಗೊಳ್ಳಿ. ನಾಡದ್ದು ಬನ್ನಿ."

ಸೌದಾಮಿನಿ ಫೋನನ್ನು ಟಕ್ ಎಂದು ಕೆಳಗಿಟ್ಟಳು.

ಎರಡು ಮೂರು ನಿಮಿಷಗಳಲ್ಲಿ ಇನ್ನೊಂದು ಕರೆ ಬಂತು:

"ಪರಶುರಾಮ್ ಅವರು ಇಲ್ಲವ?"

ಸ್ವರವನ್ನು ಗೊಗ್ಗರಗೊಳಿಸಿ ಸೌದಾಮಿನಿ ಅಂದಳು:

"ಕಾಲು ಗಂಟೆ ಬಿಟ್ಕೊಂಡು ಫೋನ್ ಮಾಡಿ."

“ನಾನು ಮುರಬದ ಶಾಸಕ. ಶಾಸಕರ ಭವನದಲ್ಲಿದ್ದೇನೆ. ಅರ್ಜೆಂಟ್. ಫೋನ್ ಮಾಡೋದಕ್ಕೆ ಅವರಿಗೇ ಹೇಳಿ."

ಒಬ್ಬಳಿಂದಲೇ ವಿವಿಧ ಪಾತ್ಪಾಭಿನಯ.

ಮತ್ತೊಂದು ರಿಂಗ್ ಬಂತು. ರಿಸೀವರನ್ನು ಎತ್ತಿ ಇಟ್ಟಳು. ಸಂಪರ್ಕ ಕಡಿಯಿತ, ಇನ್ನೊಂದು ರಿಂಗ್. ಪುನಃ ಹಿಂದಿನಂತೆ ಎತ್ತಿಟ್ಟಳು. ಹೀಗೆ ನಾಲ್ಕು ಬಾರಿ. ರಾಬರ್ಟ್ ಬ್ರೂಸ್‍ನ ತಾಳ್ಮೆ ಇರಲಿಲ್ಲ ಆತನಿಗೆ. ಫೋನ್ ಕೆಟ್ಟಿರಬೇಕೆಂದು ಭಾವಿಸಿ ಸುಮ್ಮನಾದ.

ಪ್ಲಗ್ ತೆಗೆಯದೆ ರಿಸೀವರನ್ನಷ್ಟೆ ಕೆಳಗಿಟ್ಟರೆ? ಟರ್‍ರ್‍ರ್‍ರ್.

ತಾನು ಮೊದಲು ಫೋನ್ ಮಾಡಿದ್ದು ಎಲ್ಲಿ? ಯಾವಾಗ? ಯಾಕೆ?

ಮುಂಬಯಿ ನಗರದಲ್ಲಿ. ಉಳಿದ ಪ್ರಶ್ನೆಗೆ ಉತ್ತರ ತಿಳಿಯದು.

ಪರಶುರಾಮ ನೂರಾರು ಜನರಿಗೆ ನೆನಪಿನಿಂದಲೆ ರಿಂಗ್ ಮಾಡಬಲ್ಲ. ತಾನು ಒಬ್ಬರಿಗಾದರೂ ನೆರವಿಲ್ಲದೆ ಹಲ್ಲೋ ಎನ್ನಬಲ್ಲೆನೆ? ಮುಖ್ಯಮಂತ್ರಿಯ ಅಧಿಕೃತ ನಂಬರಿನ ಕಾರಿನ ನೆನಪಾದರೂ ಉಂಟೆ ತನಗೆ ? ಸಾವಿರ ? ಲಕ್ಷ? ಕೋಟಿ? ಊಹೂಂ. ಒಮ್ಮೆ ತನಗೆ ಬಾಲ್ಯದಲ್ಲಿ, ಹೆದ್ದಾರಿಯಲ್ಲಿ, ಒಂದು ರೂಪಾಯಿ ನಾಣ್ಯ ಸಿಕ್ಕಿತು. ಅತ್ತಿತ್ತ ನೋಡದೆ ಅದನ್ನೆತ್ತಿಕೊಂಡು ಕಾಲಿಗೆ ಬುದ್ದಿ ಹೇಳಿದ್ದೆ ಅದನ್ನು ಎಷ್ಟೋ ಕಾಲ ಸುರಕ್ಷಿತವಾಗಿ ಇಟ್ಟಿದ್ದೆ. ಪುಟ್ಟವ್ವನಾಗಿದ್ದಾಗಲೂ ಅದಿತ್ತು. ಅಲ್ಲಿ ಯಾರೋ ಕದ್ದರು.

ಹೊತ್ತು ಕಳೆಯಬೇಕು. ವಿಮಾನ ನಿಲ್ದಾಣದಲ್ಲಿ ಹಾಜರಿ ಹಾಕುವ ಹೊತ್ತಾಯಿತೆ ?

ನಿಮಿಷಗಳನ್ನು ಕಲೆ ಹಾಕಬೇಕು.

ಕ್ಷಣವೊಂದು ಯುಗವಾಗಿ ?