ಪುಟ:ಮಿಂಚು.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು ‍

೧೯

“ಮುಂಬಯಿ, ದಿಲ್ಲಿ, ಕಲ್ಕತ್ತೆ, ಹೈದರಬಾದು, ಮದರಾಸು, ಕಲ್ಯಾಣನಗರ,
ಗಳಲ್ಲಿ ಹತ್ತು ಕೋಟಿ ಕೂಡಿಸೋದಕ್ಕಾಗೋದಿಲ್ಲ ಅಂತೀಯಾ ?”
“ಐದು ವರ್ಷ ದುಡಿದರೆ ಆದೀತು.”
ಪುಟ್ಟವ್ವ ದನಿಗೂಡಿಸಿದಳು ;
“ಪಂಚವಾರ್ಷಿಕ ಯೋಜನೆ !”
“ಮಾತು ಆರಂಭವಾದದ್ದು ಕಿಷ್ಕಿಂಧೆಯ ಜಿಲ್ಲೆಗಳಲ್ಲಿ ಒಂದೊಂದು ಅಂತ.
ಈಗ ಇಡೀ ದೇಶವನ್ನೇ ಕಬಳಿಸಿದ್ದೇವೆ.”
“ನೂರು ಕಾರ್ಯಕರ್ತೆಯರು ದೇಶಸಂಚಾರ ಮಾಡಬೇಕು.”
___ಅಷ್ಟು ಹೇಳಿ, ಬೃಹತ್ ಪ್ರಮಾಣದ ಆ ಚಟುವಟಿಕೆಯನ್ನು ಚಿತ್ರಿಸಿ
ಕೊಳ್ಳುತ್ತ ವಿನೋದ ಕಾಫಿ ಹೀರಿದ.
ಪುಟ್ಟವ್ವ ಒದ್ದಾಡಿದಳು. ಹಿಂದಿನ ರಾತ್ರಿ ಮಲಗಿದೊಡನೆ ನಿದ್ದೆಯ ಆಳಕ್ಕೆ
ಇಳಿದಿದ್ದಳು. ಬೆಳಗ್ಗೆ ಬೇಗನೆ ಎಚ್ಚರವಾಗಿತ್ತು. ಹೊರಗೆ ಉಷಃಕಾಲದ ಮಬ್ಬು
ಬೆಳಕು; ಕಿಟಕಿಯ ಬಳಿ ನಿಂತು ಯೋಚಿಸಿದಳು. ನಿಜ ಸಂಗತಿಯನ್ನು ಮೃದುಲಾ
ಬೆನ್‌ಗೆ ಹೇಳಬೇಕೆ ? ಬೇಡವೆ ? ಸಂಕಟದಿಂದ ಪಾರಾಗಿ ಬಂದೆ. ಅಪಾಯ ಇನ್ನೂ
ಹೆಡೆಯಾಡಿಸುತ್ತಿತ್ತು. ಆದರೂ ಅಕ್ಕನ ಹಿತವಚನ ತನಗೆ ಸಂಜೀವನಿ, ನಿಧಿ
ಸಂಗ್ರಹದ ಮಾತು ಬಂದಿತ್ತು. ಇದೇನು ಪುನರ್ಜನ್ಮವೆ ತನಗೆ ? ಕಡಲಿನಲ್ಲಿ
ಹೊಯ್ದಾಟಗಳಿದ್ದರೇನಾಯಿತು? ನಾವೆ ಸುರಕ್ಷಿತವಾಗಿರಬೇಕಾದುದಲ್ಲವೆ ಮಹತ್ವದ್ದು?
ನಾವಿಕನಿಲ್ಲದ ನಾವೆ, ಮತ್ತೆ ದಡ ಸೇರುವೆನೊ ಇಲ್ಲವೊ ?
ಆದರೆ ಬೆಳಕು ಹರಿದು ಸ್ವಲ್ಪ ಹೊತ್ತಾದೊಡನೆಯೆ ಮೃದುಲಾಳ ಕಾರ್ಯ
ವಿಧಾನ ತನ್ನ ಕಣ್ಣುಗಳೆದುರು ಕೋರೈಸಿದ ಮಿಂಚಾಯಿತು.ಈಗ ವಿನಾಯಕ-
ವಿನೋದನಾಯಕ ಬಂದೇ ಬಿಟ್ಟಿದ್ದಾನೆ, ವಿನಂತಿಪತ್ರ ರಚನೆಗೆ ವಿವರ ಸಂಗ್ರಹಿಸಲು.
ಕಿಷ್ಕಿಂಧಾಕಾಂಡ ತನ್ನ ಬೆನ್ನು ಬಿಡದ ಭೇತಾಳ, ಕಲ್ಯಾಣನಗರದಲ್ಲಿ ಆಗಬೇಕಲ್ಲವೆ
ತನ್ನ ಕಲ್ಯಾಣ ?
“ವಿನೋದ್, ನಿಧಿಸಂಗ್ರಹ ತಂಡಕ್ಕೊಬ್ಬ ಸಂಪರ್ಕಾಧಿಕಾರಿಬೇಕು. ಹೋದಲ್ಲೆಲ್ಲ
ಪತ್ರಿಕಾಗೋಷ್ಠಿ ಇತ್ಯಾದಿ ಕೆಲಸಗಳಿದ್ದವೆ. ಸಾಕಷ್ಟು ಯುವಕನಾಗಿರಬೇಕು : ನಡೆ
ಚೆನ್ನ, ನುಡಿ ಚೆನ್ನ..."
“ನಾನು ಆಗಬಹುದಾ ? ನಡತೆ ಬಗ್ಗೆ ಸೆಕ್ಯೂರಿಟಿ ಕೊಡ್ತೀನಿ.”
“ಸಹಾಯಕ ಸಂಪಾದಕ ಹುದ್ದೆಗೆ ಹತ್ತಿರ ಬಂದಿದೀಯಾ...ಹುಡುಗಿಯರು
ಯಾವಾಗಲೂ ಇರ‍್ತಾರೆ. ಮೊದಲು ನಿನ್ನ ಸ್ಥಾನ ಭದ್ರ ಮಾಡಿಕೊ.”
“ಅಪ್ಪಣೆ! ಮನವಿ ಇತ್ಯಾದಿ ಸಿದ್ಧವಾದ ಮೇಲೆ ನೀವೊಂದು ಪತ್ರಿಕಾಗೋಷ್ಠಿ
ಕರೀಬೇಕು.”
ತನ್ನೊಳಗಿನ ತಾಕಲಾಟ ಇತರರಿಗೆ ತಿಳಿಯಬಾರದೆಂದು ಪುಟ್ಟವ್ವ ಮುಗುಳು