ಪುಟ:ಮಿಂಚು.pdf/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 244 ಮಿಂಚು

   ಧರ್ಮಮಠಕ್ಕೆ ಹೋದಳು. ಡ್ರೈವರನಿಗೆ “ಕಾರಲ್ಲೇ ಇರು" ಎಂದು ಹೇಳಿ ಪರಶುರಾಮನನ್ನು ಜಗಲಿಯಲ್ಲಿ ನಿಲ್ಲಿಸಿ ಒಳ ಸಾಗಿದಳು.
   ಸ್ವಾಮೀಜಿ ಒಂದು ತಾಳೆಗರಿ ವಾಚನದಲ್ಲಿ ಮಗ್ನರಾಗಿದ್ದರು. ಅವರಿಗಿನ್ನೂ ಮುಖ್ಯಮಂತ್ರಿಯ ಪದಚ್ಯುತಿಯ ಸುದ್ದಿ ಮುಟ್ಟಿರಲಿಲ್ಲ. ಅವರು ನಿರ್ಲಿಪ್ತ ಮುಖ ಮುದ್ರೆಯಿಂದ ಸೌದಾಮಿನಿಯನ್ನು ನೋಡಿದರು.
   “ನಿಮ್ಮ ಮನಸ್ಸು ಶಾಂತವಾಗಿರಲಿ. ದಂತೇಶ್ವರಿ ಅದೇನೊ ಪರೀಕ್ಷೆ ನಡೆಸುತ್ತಿದ್ದಾಳೆ, ಎಲ್ಲ ಸರಿ ಹೋಗ್ತದೆ.” ಎಂದರು.
   “ಒಮ್ಮೆ ತಿಜೋರಿಗಳ ಕೊಠಡಿಗೆ ಹೋಗಣವೊ ?”
   “ಬನ್ನಿ.”
   ತಿಜೋರಿ ತೆರೆದು,“ಎಣಿಸಿಲ್ಲ," ಎಂದರು.
   “ದೊಡ್ಡದಲ್ಲ. ಒಂದು ದಿನ ಎಣಿಸಿ ಬಾಬಾಜಿಗೆ ತಲಪಿಸಬಿಡಿ. ಅದು ಧರ್ಮೆಂದ್ರ ಮಠಕ್ಕೆ ನನ್ನ ಕಾಣಿಕೆ."
   “ಆಗಲಿ.”
   ಬೀಗ ಹಾಕಿ, ಮತ್ತೆ ಬಂದು ಕುಳಿತರು.
    ಸೌದಾಮಿನಿ ಅಂದಳು:
   “ನಾಲ್ಕು ದಿನ ಹಾಯಾಗಿರಬೇಕು, ಪ್ರಕೃತಿಯ ಮಡಿಲಲ್ಲಿ ಅವಿತಿರಬೇಕು ಅಂತ ಆಸೆ. ಏಕಾಗ್ರಚಿತ್ತದಿಂದ ಸ್ವಲ್ಪ ಧ್ಯಾನ ಮಾಡಬೇಕು."
   “ಬ್ರಹ್ಮಗಿರಿಯ ತಪ್ಪಲಲ್ಲಿ ನಮ್ಮದೊಂದು ಧರ್ಮಮಠ ಇದೆ, ಸ್ವಾಮೀಜಿಗೆ ಓಲೆ ಕೊಡ್ತೇನೆ. ಅಲ್ಲಿ ಇದ್ದು ಬನ್ನಿ."
   "ನಾಳೆ ಬೆಳಗ್ಗೆ ಕಾವೇರಿ ಸ್ನಾನ ಮಾಡಿ ಹಾಗೇ ಮುಂದುವರೀತೇನೆ. ಈಗ ಬರಲಾ? ಆಶೀರ್ವದಿಸಿ," -
   ಅವಳು ಸ್ವಾಮೀಜಿಯ ಪಾದಗಳಿಗೆ ನಮಸ್ಕರಿಸಿದಳು.
   “ದಂತೇಶ್ವರಿಯ ರಕ್ಶೆ ನಿಮಗಿರಲಿ.”
                          *     *     *
   ಮುಖಕ್ಕೆ ನೀರು ಹನಿಸಿದಳು. ಮೈಯುರಿ ಕಡಮೆಯಾಗಲಿಲ್ಲ.
   ತಲೆಯನ್ನು ದಿಂಬು ಕರೆಯಿತು.
   ಧ್ವನಿವಾಹಕವನ್ನೆ ಕಿತ್ತನಲ್ಲ ಆ ತುಚ್ಛ ಮನುಷ್ಯ? ಸೌದಾಮಿನಿಯನ್ನು ಹಾಸಿಗೆ ಮಾಡಿದಾಗ ಚೆನಾಗಿತ್ತೇನೊ ? ...ತಾನು ಕಿಷ್ಕಿಂಧೆಹೆ ಮರಳದೇ ಇದ್ದಿದ್ದರೆ ಜಾಣಪ್ಪನ ಬಳಿಕ ವಿಶ್ವಂಭರನೇ ಮುಖ್ಯಮಂತ್ರಿಯಾಗುತ್ತಿದ್ದನೇನೊ? ಯಾರಿಗೆ ಗೊತ್ತು ? ಅಂತೂ ಎಲ್ಲರ ಲೆಕ್ಕಾಚಾರಗಳನ್ನೂ ನಾನು ತಲೆಕೆಳಗು ಮಾಡಿದೆ.