ಪುಟ:ಮಿಂಚು.pdf/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

246 ಮಿಂಚು

   “ಸಂಪುಟರಚನೆ ಜಟಿಲವಾಗ್ತಿದೆಯಂತೆ." 
   “ನಂಬಬೇಡಿ. ವಿಶ್ವಂಭರ ಹಿಕ್ಮತ್ವಾಲಾ ಹಿಮ್ಮತ್ವಾಲಾ ಎರಡೂ, ರಾಜ್ಯ ಚೆನ್ನಾಗಿ ಆಳ್ತಾನೆ."
   ಪರಶುರಾಮ ಒಳಕ್ಕೆ ತಲೆಹಾಕಿ “ಪತ್ರಿಕೆಯವರು ಕಾದಿದ್ದಾರೆ” ಎಂದ. 
   “ಇನ್ನು ನನ್ನ ಹತ್ತಿರ ಏನಿದೆಯಪ್ಪ? ರಾಜಕೀಯದಲ್ಲಿ ಇರೋವರೆಗೂ ಪತ್ರಿಕೆಯವರ ನಂಟು ತಪ್ಪಿದ್ದಲ್ಲ. ನಾಳೆ ಹೊಸ ಸಂಪುಟದ ಅಧಿಕಾರ ಗ್ರಹಣ ಆದ್ಮೇಲೆ_ಬೇಡ, ೧೦ ಗಂಟೆಗೆ__ಇಲ್ಲಿಗೆ ಬರ್ಲಿ. ನಿವಾಸ ಬಿಡೋ ಗಲಾಟೇಲಿ ಇರ್ತಿನಿ. ಆದರೂ ಪರವಾಗಿಲ್ಲ ಮಾತನಾಡೋಣ, ರಾಜಭವನದಲ್ಲಿ ಉಪಾಹಾರ ಮುಗಿಸ್ಕೊಂಡೇ ಬರ್ಲಿ. ಇಲ್ಲಿ ಅಂಥದು ಏನೂ ಇರೋದಿಲ್ಲ. ಹಾಗೇಂತ ಹೇಳ್ಬಿಡಪ್ಪ.”
   ಗುಪ್ತಚಾರ ದಳದ ಮುಖ್ಯಸ್ಥ ಕೇಳಿದ : 
   “ನಾಳೆ ಹೊರಗಿರೋ ಕಾರಿನಲ್ಲೇ ಹೋಗ್ತೀರಾ ?"
   "ಹೌದು. ಬಾಡಿಗೆಗೆ ತಗೊಂಡಿದೀನಿ. ಅಷ್ಟು ಹಣ ನನ್ನಲ್ಲಿದೆ, ಸಂಬಳ ತಗೊಳ್ತಿದ್ದೆ ನೋಡಿ."
   “ಮಾತಾಜಿ, ಇನ್ನೂ ಬೇಸರದಲ್ಲಿದೀರಿ."
   “ಇದು ಬೇಗನೆ ಮುಗಿಯೋ ಬೇಸರವಲ್ಲವಪ್ಪ.” 
   ಪರಶುರಾಮ ಮತ್ತೊಮ್ಮೆ ತಲೆ ಒಳಹಾಕಿ, “ಚೀಫ್ ಸೆಕ್ರೆಟರಿ ಬಂದ್ರು” ಎಂದ.
   ಗುಪ್ತಚಾರದಳದ ಮುಖ್ಯಸ್ಥ “ನಾನು ಬರ್ತೇನೆ" ಎಂದು ಹೇಳಿ ಹೊರಟು ಹೋದ.
   “ಬನ್ನಿ ಚೌಗುಲೆ ಸಾಹಿಬ್. ನಕುಲದೇವ್ ಸಿಕ್ಕಿದ್ರಾ ?”
   “ಸಿಕ್ಕಿದ್ರು. ಹೀಗೆಲ್ಲ ಆಯ್ತೂಂತ ನನಗೆ ಬೇಸರವಾಗ್ತಿದೆ, ಮಾತಾಜಿ." 
   “ನನ್ನ ಅಧಿಕಾರಾವಧಿಯಲ್ಲಿ ಸಹಕಾರ ನೀಡಿದಿರಿ. ನಮ್ಮೊಳಗೆ ಸದ್ಭಾವನೆ ಸದಾ ಕಾಲ ಎರಲಿ ".
   “ಬರಲಾ? ನಮಸ್ಕಾರ.” 
   “ಖಾತೆ ಹಂಚಿಕೆ ಸಮಾಲೋಚನೆಗಾಗಿ ನಿಮ್ಮ ದಾರಿ ಕಾಯ್ತಿದಾರೇನೋ ? ಯಾರು ಯಾರು ಮಂತ್ರಿಗಳು ಅಂತ ಗೊತ್ತಾಯ್ತೆ ?”
   “ಮೊದಲನೆ ಪ್ರಶ್ನೆಗೆ ಉತ್ತರ_ಹೌದು. ಎರಡನೆಯದಕ್ಕೆ-ಇಲ್ಲ.” 
   “ಹೋಗಿ ಬನ್ನಿ. ಸದಾ ನಿಮ್ಮ ಶುಭ ಚಿಂತನೆ ಮಾಡ್ತೇನೆ.” 
   ಅಂಗರಕ್ಷಕರು ಬಂದರು.
   ರಾಮ್ಧನ್ ಹೇಳಿದ್ದನ್ನೇ ಬೋಲಾನಾಥ್ ಹೇಳಿದ : 
   “ಇಲ್ಲಿಯ ಕೆಲಸ ಆಯ್ತು. ದಿಲ್ಲಿಗೆ బన్ని ಅಂತ" ನಕುಲದೇವ್ಸಾಬ್ ಹೇಳಿದರು."
   “ನಾಳೆಯೇ ಹೊರಡ್ತೀರಾ ?”
   “ಹೌದು, ರೈಲಿನಲ್ಲಿ.” (ವಿಮಾನದಲ್ಲಿ ಅಂದ್ಕೊಂಡ್ರೇನೊ ಈ ಗೂಳಿಗಳು ?)