ಪುಟ:ಮಿಂಚು.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

22

ಮಿಂಚು

ಕಾರು ಮುಂದುವರಿಯಿತು. ಅವತ್ತು ದೊಡ್ಡ ಪಟ್ಟಿಯ ದಿನವಲ್ಲ. ಪುಟ್ಟ ಪುಸ್ತಕವಿತ್ತು. ವಿನೋದ್ ಕಾರ್ಯಾಲಯಕ್ಕೆ ಬಂದಿರಲಿಲ್ಲ.

"ಬರುವ ಹೊತ್ತಾಯ್ತು."

ಮೃದುಲಾ ನಂಬರ್ ಕೊಟ್ಟಳು.

"ಅವರ ಸ್ನೇಹಿತರು, ಕಾಯಿರೀವಿ."

ಕೆಲ ಮಿನಿಟುಗಳಲ್ಲಿ ರಿಂಗ್ ಬಂತು, ವಿನೋದ್ ತನ್ನ ಸ್ಥಾನಕ್ಕೆ ಬಂದಿದ್ದ, ಮೃದುಲಾಬೆನ್ ಹೇಳಿದ್ದನ್ನೆಲ್ಲ ಕೇಳಿದ ಬಳಿಕ ವಿನೋದ್ ಅಂದ:

"ಹಾಗಾದರೆ ಯೋಜನೆಯೆಲ್ಲ ಪೂರ್ತಿ ನಿಮ್ಮದೇ, ಇದು ಕ್ಷಿಪ್ರಕ್ರಾಂತಿ ಇದ್ದ ಹಾಗಿದೆ!"

"ಪುಟ್ಟ ಇಲ್ಲೇ ಇದ್ದಾಳೆ. ಅವಳೊಂದು ರತ್ನ, ಕಿಷ್ಕಿಂಧೆಯಲ್ಲಿ ಅವಳಿಗೆ ಬಿಡುವಿಲ್ಲದ ಕೆಲಸ."

"ಸರಿ,"

ರವಿವಾರ ರಾತ್ರಿಯ ಊಟಕ್ಕೆ ಆಹ್ವಾನ.

"ಉಪಕೃತ" ಎಂಬ ನಾಜೂಕಿನ ಪ್ರತಿಮಾತು ಅತ್ತಣಿಂದ,

....ರವಿವಾರದ ವಿಶೇಷ ಊಟದ ವಿಷಯ ತಿಳಿದು ಜುಮ್ಮಿ ಸಂತೋಷಪಟ್ಟಳು, ಒಂದು ದಿನ ವಿನೋದ್‌ಕಾಕ ಮಾಜಿಯ ಎದುರಲ್ಲೇ ತನ್ನ ನಡುವನ್ನು ಸುತ್ತುವರಿದು ತಬ್ಬಿಕೊಂಡಿದ್ದ, ಮಾಜಿಯ ಅಪ್ಪುಗೆಗಿಂತ ಅದು ಭಿನ್ನವಾಗಿತ್ತು. ನೆನಪಾದಾಗಲೆಲ್ಲ ಮತ್ತೆ ಮತ್ತೆ ಬೇಕು ಎನಿಸುತ್ತಿತ್ತು. ಆದರೆ ಮಾಜಿ ಗದರಿಸಿದ್ದರು-ತನಗೂ ವಿನೋದ ಕಾಕನಿಗೂ, ವಿನೋದನಿಗೆ ಹೊರಹೋಗುತ್ತಿದ್ದಂತೆ; "ಜುಮ್ಮಿ ಇನ್ನೂ ಸ್ವಲ್ಪ ಬೆಳೀಲಿ, ವಿನೋದ್, ಯಾಕೆ ಅವಸರ?" ತನಗೆ ಆ ರಾತ್ರಿ ಶಯ್ಯಾಗೃಹದಲ್ಲಿ, ದೀಪ ಆರಿಸಿದ ಬಳಿಕ: "ಹಾಗೆಲ್ಲ ಮಾಡೋದಕ್ಕೆ ಅವನಿಗೆ ಸಲಿಗೆ ಕೊಡ್ಬೇಡ, ನಂಬ ಬಾರದು ಈ ಗಂಡಸು ಜಾತೀನ."

"ಹಾಗೇ ಆಗಲಿ, ಮಾಜಿ, ನಂಬೋದಿಲ್ಲ, ಮಾಜಿ."

***


ವಿಶೇಷ ಅಡುಗೆ ಅಲ್ಲವೆ?

"ವಿನೋದ್‌ಗೆ ತಂದೂರಿ ಚಿಕನ್ ಇಷ್ಟ."

ಅದು ಒಂದು ಮೈಲು ದೂರದಲ್ಲಿದ್ದ ಮೇಲ್ದರ್ಜೆಯ ಹೋಟಲಿನಿಂದ ಬಂತು,

ಬೇರೆ ರಸಗವಳವೆಲ್ಲ ಜುಮ್ಮಿಯದು. ಮೃದುಲಾ ಆಗಾಗ್ಗೆ ಅಡುಗೆಮನೆಗೆ ಬಂದು, ರುಚಿನೋಡಿ, ಉಸ್ತುವಾರಿ ನಡೆಸಿದಳು.

ಪುಟ್ಟವ್ವ ತೊಟ್ಟಿಲು ತೂಗಿದವಳೂ ಅಲ್ಲ; ಸೌಟು ಹಿಡಿದವಳೂ ಅಲ್ಲ. ಅವಳು ಆಗಾಗ್ಗೆ ಗೊಣಗುತ್ತಿದ್ದಳು: