ಪುಟ:ಮಿಂಚು.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕರುಣ ಬಂದಳು. 'ಮೃದುಲಾ' ನಿಧಾನವಾಗಿ 'ಮೃದುಲಾ ಮಾಯಿ' ಆದಳು. "ಹಲವು ಜನ್ಮಗಳ ಪುಣ್ಯ ಫಲವಿರಬೇಕು ನೀನು ನನಗೆ ಶಿಷ್ಠೆಯಾಗಿ ದೊರೆತಿರೋದು" ಎಂದಳು ಹಿರಿಯವಳು ಕರುಣಾಗೆ.

"ಎಲ್ಲಾ ಸರಿ ಮಾಯಿ. ಆದರೆ ಈ ವಿನೋದನನ್ನ ಕಂಡರೆ ನನಗೆ ಸಿಟ್ಟು ಬರುತ್ತಲ್ಲ?"

"ರಾಜಿಗಳ ನೂರು ಕೊಂಡಿ ಇಲ್ಲದೆ ಯಾವ ಜೀವನವೂ ಸುಗಮವಾಗೋದಿಲ್ಲ, ಹಿಂದಿನದನ್ನು ಮರೆತುಬಿಡು. ಅವನೀಗ ಸಭ್ಯ ಯುವಕ ಆತನಿಗೆ ಸದ್ಯದಲ್ಲೇ ಭಡತಿಯಾಗ್ತದೆ. ಇನ್ನು ಐದು ವರ್ಷಗಳಲ್ಲಿ 'ಟೈಮ್ಸ್' ಪತ್ರಿಕೆಗೆ ಸಂಪಾದಕನಾದರೂ ಆದನೇ."

"ಆಗಲಪ್ಪ. ಅವನಿಗೆ ಪ್ರಧಾನ ಸಂಪಾದಕ ಅಂತ ಕಿರೀಟಧಾರಣೆ ಆದರೂ ಅವನ ಬಗ್ಗೆ ನನ್ನ ನಿಲುವು ಬದಲಾಗೋದಿಲ್ಲ."

"ನೀನು ಹಟಮಾರಿ, ಈಗ ಯಾಕೆ ಹೇಳಿ? ಕ್ರಮೇಣ ನಿನಗೇ ಗೊತ್ತಾಗುತ್ತೆ...” ಎಂದು ಮೃದುಲಾ ನಗುತ್ತ ಅಂದಳು.

ಮಾರನೆಯ ದಿನ ವಿನೋದ ಬಂದಾಗ ಕರುಣಾ ಸಲಾಂ, ಎಡಿಟರ್ ಸಾಬ್ ಎಂದಳು.

ಆತ ಬಲ ಬೆರಳುಗಳನ್ನು ಮೂರು ಬಾರಿ ತುಟಿಗಳಿಗೆ ಮುಟ್ಟಿಸುತ್ತೆ ಅಂದ:

"ಆಲೇಕುಮ್ ಸಲಾಂ."

ಪುಟ್ಟವ್ವ ಸಣ್ಣನೆ ನಕ್ಕಳು. ಈ ಮನೆಯಲ್ಲಿ ತಾನು ಮೂಲೆಗುಂಪಾಗುತ್ತಿದ್ದೇನೆ ಎನಿಸಿತು ಅವಳಿಗೆ,

....ವಿನಂತಿಪತ್ರ ಅಚ್ಚಾಗಿ ಬಂತು. ಸೊಗಸಾದ ಮುದ್ರಣ,

"ಬಿಲ್ ಸಂದಾಯ ಆಮೇಲೆ ಅಂತ ಹೇಳಿದೇನೆ"

ಮೃದುಲಾ ಕರುಣಾಗೆ ಒಂದನ್ನು ಕೊಟ್ಟಳು. ಎರಡು 'ಸಹಿ'ಗಳು: ಮೃದುಲಾ ಬೆನ್ ಮತ್ತು ಕುಮಾರಿ ಕರುಣಾಬೆನ್, ತನ್ನನ್ನೇ ದಿಟ್ಟಿಸುತ್ತಿದ್ದ ವಿನೋದನತ್ತ ಕರುಣಾ ಕಿರುನಗೆ ಬೀರಿದಳು, ಪುಟ್ಟವ್ವ ವಿನಂತಿಪತ್ರ ಓದಿದಳು: ಯಾವ ಭಾವನೆಯನ್ನೂ ವ್ಯಕ್ತಪಡಿಸಲಿಲ್ಲ.

"ಮುಖ್ಯ ಹತ್ತು ಹೆಸರು ನೀವು ಗೊತ್ತು ಮಾಡಿದ ದಿನವೇ ಪತ್ರಿಕಾಗೋಷ್ಠಿ,