ಪುಟ:ಮಿಂಚು.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೂರನೆಯ ತರಗತಿಯಲ್ಲಿ ಮುಂಬಯಿಗೆ ಜುಕು ಜುಕು ಜೂ ಪಯಣ. ಮೇಲ್ತರಗತಿಯ ಪ್ರವಾಸಕ್ಕೆ ಹಣವಿರಲಿಲ್ಲ ಎಂದಲ್ಲ. ಸುಮ್ಮ ಸುಮ್ಮನೆ ಖರ್ಚು ಮಾಡುವುದೇತಕ್ಕೆ ? ಮಹಾತ್ಮರು ಥರ್ಡ್ ಕ್ಲಾಸಿನವರಾಗಿಯೇ ಇಂಡಿಯಾದ ಉದ್ದಗ ಲಕ್ಕೆ ಪ್ರಯಾಣ ಬೆಳೆಸಿ ಜನಕೋಟಿಯ ಮೇಲೆ ಮೂಡಿ ಬೀಸಲಿಲ್ಲವೆ ? ವಿಚಿತ್ರ ಮನುಷ್ಯ. 'ಮೊದಲು ವಯಸ್ಸಿಗೆ ಮನ್ನಣೆ' ಎಂದು ತನ್ನಷ್ಟಕ್ಕೆ ಪಿಸುನುಡಿ ದಿದ್ದರೂ ಸಾಕಾಗುತ್ತಿತ್ತು. ಅವರಿಗೇ ಪಟ್ಟ ಕಟ್ಟುತ್ತಿದ್ದರು. ಅರ್ಧ ನಗ್ನ ಸಮ್ರಾಟ. ಅಂಗೈ ಬಳಿಗೆ ಬಂದಿದ್ದ ಅಧಿಕಾರವನ್ನು ಬದಿಗೆ ತಳ್ಳಿದರು ; ಹುತಾತ್ಮರಾದರು.

ಯಾರಿಗೆ ಗೊತ್ತು ? ತಾನು ಕುಳಿತಿದ್ದ ಮೂಲೆಯಲ್ಲಿಯೇ ಮಹಾತ್ಮರೂ ಹಿಂದೊಮ್ಮೆ ಕುಳಿತಿದ್ದರೇನೊ, ಆ ಪುಣ್ಯ ಬಲದಿಂದ ತಾನೂ ಒಬ್ಬ ಹಿರಿಯ ವ್ಯಕ್ತಿ ಯಾದರೆ? ಬೇಡ ಎನ್ನುವುದಿಲ್ಲ. ಹಾಗೆ ಆಯಿತು. ಅಧಿಕಾರ ಹತ್ತಿರಕ್ಕೆ ಬಂತು_ ಎಂದಿಟ್ಟುಕೊಳ್ಳಿ, ಅದನ್ನು ಬದಿಗೆ ತಳ್ಳಲಾರೆ, ಬಿಗಿ ಮುಷ್ಟಿಯಲ್ಲಿಟ್ಟುಕೊಳ್ಳುವೆ. ಹುತಾತ್ಮಳು ಎನ್ನಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.

ಒಬ್ಬ ಎದ್ದು , ಎದುರು ದಿಕ್ಕಿನಲ್ಲಿ ಮೇಲ್ಗಡೆ ಹೇರಿದ್ದ ಸಾಮಾನುಗಳಲ್ಲಿ ಕೆಲವನ್ನು ಕೆಳಗಿದ್ದವರಿಗೆ ದಾಟಿಸಿ, ಉಳಿದುವನ್ನು ಜೋಡಿಸಿ, ಮಿಕ್ಕ ಜಾಗದಲ್ಲಿ ರಗ್ ಹಾಸಿದ. ಸಾಕಷ್ಟು ಲವಲವಿಕೆಯಿಂದಲೆ ಮೇಲಕ್ಕೆ ಏರಿ ಪವಡಿಸಿದ. ಮಗ್ಗುಲು ಹೊರಳಿದ ಅವನ ದೃಷ್ಟಿಗೆ ತಾನು ತುತ್ತು. ಇಬ್ಬರು ಸೀಟು ಬಿಟ್ಟು ಕೊಟ್ಟರೆ ತಾನೂ ಮುದುಡಿ ಮಲಗಬಹುದು.

ತಾನು ಚಡಪಡಿಸುತ್ತಿದ್ದುದನ್ನು ಕಂಡು, ತಂಗಿಯನ್ನೊ ಮಡದಿಯನ್ನೋ ಪ್ರೇಯಸಿಯನ್ನೋ ಕರೆದೊಯ್ಯುತ್ತಿದ್ದ ಯುವಕ ಕೇಳಿದ:

“ಸಂಗಡ ಯಾರೂ ಇಲ್ಲಾಂತ ಕಾಣ್ತದೆ. ಹೆಂಗಸರ ಕಂಪಾರ್ಟ್‌ಮೆಂಟ್...”

ತಾನು ಉತ್ತರವಿತ್ತೆ:

"ಅದು ಬೋರು, ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಜನರಲ್ ಕಂಪಾರ್ಟ್ ಮೆಂಟ್ ವಾಸಿ ಅಂತ___”

"ಇನ್ನು ಸ್ವಲ್ಪ ಹೊತ್ತಿನಲ್ಲಿ ಕೆಳಗೆ ಕೆಲವರಾದರೂ ಹಾಸ್ಕೊಳ್ತಾರೆ. ಆಗ ಸೀಟು ಖಾಲಿಯಾಗದೆ, ಇವಳಿಗೂ___”

"ಇವರು ?”