ಪುಟ:ಮಿಂಚು.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

91

“ನಿಮಗೆ ಇಂಗ್ಲಿಷಲ್ಲದೆ ಬೇರೆ ಯಾವ ಭಾಷೆ ಬರುತ್ತಪ್ಪ ?”
“ಫ್ರೆಂಚ್ ಬರುತ್ತೆ, ಮದಾಮ್,”
“ಫ್ರಾನ್ಸಿಗೆ ರಾಯಭಾರಿಯಾಗೋದಕ್ಕೆ ಲಾಯಕ್ಕು ನೀವು.”
“ಕ್ಷಮಿಸಿ, ಮದಾಮ್, ನಾನು ಬಡವ, ನನಗೆ ಈ ಸ್ಥಾನ ಸಾಕು,”
“ಎಲ್ಲಿ ನನ್ನ ಕೊಠಡಿ ?”
ಬೀಗದ ಕೈ ಆತನ ಕೋಟಿನ ಒಳ ಕಿಸೆಯಲ್ಲಿತ್ತು. ಅವನು ಬೀಗ ತಗಲಿಸಿದ್ದ
ಕೊಠಡಿಯತ್ತ ಓಡಿದ, ಒಳಗೆ ಎಲ್ಲ ಸರಿಯಾಗಿದೆ ಎಂದು ಖಚಿತ ಮಾಡಿಕೊಂಡು,
ಹಣಿಗೆಯಿಂದ ತನ್ನ ಕ್ರಾಪನ್ನೊಮ್ಮೆ ಬಾಚಿ, ಅಲ್ಲಿದ್ದ ನಿಲುವುಗನ್ನಡಿಯಲ್ಲಿ ಮುಖ
ನೋಡಿ, ಕರವಸ್ತ್ರದಿಂದ ಬೆವರು ಒರೆಸಿ ಹಜಾರಕ್ಕೆ ಧಾವಿಸಿ, ಕ್ಯಾರಿಯರ್-ಪ್ಲಾಸ್ಕು
ಗಳನ್ನು ತಾನೇ ಎತ್ತಿಕೊಂಡು, “ದಯವಿಟ್ಟು ಆಗಮಿಸಿ ಮದಾಮ್” ಎಂದ.
ಹಾಗೂ ಹೀಗೂ ಉಪಾಹಾರ ಮುಗಿಯಿತು, ಕೈ ತೊಳೆಯಲು ಸಿಂಕ್‌ನ ಬಳಿ
ಹೋದರೆ ನಲ್ಲಿಯಲ್ಲಿ ನೀರಿರಲಿಲ್ಲ. ಫೆರ್ನಾಂಡೀಸ್ ಅಡುಗೆ ಮನೆಗೆ ಓಡಿ, ಪಿಂಗಾಣಿ
ಬೌಲಿನಲ್ಲಿ ನೀರು ತಂದ, ಕಾಫಿ ಪರವಾಗಿರಲಿಲ್ಲ,
ಪರಶುರಾಮ ತನ್ನ ಉಪಾಹಾರಕ್ಕೆ ಹೋದ. ಅಡುಗೆಯವನು ಫೆರ್ನಾಂಡೀಸ
ನನ್ನು ಬದಿಗೆ ಕರೆದು ಗೋಗರೆದ :
“ನನ್ನ ಮಾನ ಹೋಯ್ತು, ಇನ್ನು ಕೆಲಸವೂ ಹೋದೀತು. ಮುಖ್ಯಮಂತ್ರಿಣಿ
ಯವರ ಎಲ್ಲ ಊಟೋಪಚಾರಗಳೂ ಇನ್ನು ಇಲ್ಲಿಯೇ ಆಗಬೇಕು. ಅವರು
ಮಾತಾಜಿ ಅಂತ, ನೀವು ಸರ್ ಮದಾಮ್ ಅಂತೆಲ್ಲ ಕರೀಬೇಡಿ.”
“ಪರಶುರಾಮ್ ಇನ್ನೇನು ಹೇಳಿದ್ರು ?”
"ಅವರ ರುಚಿ ವಿಷಯ ಎಲ್ಲ ಕೇಳಿ ತಿಳಿದಿದ್ದೇನೆ. ಮಾತಾಜಿಯವರಿಂದ ನಾನು
ಸರ್ಟಿಫಿಕೇಟು ಪಡೀದಿದ್ರೆ ಹಾಳು ಬಾವಿಗೆ ಬಿದ್ದು ಸಾಯೇನೆ, ಖಂಡಿತ. (ಸ್ವರ
ತಗ್ಗಿಸಿ)...ಆ ಮೂವರನ್ನು ಹೊರಗೆ ಹಾಕಿ, ತಡ ಮಾಡ್ಬೇಡಿ.”
ಲೋಕಸಭಾ ಸದಸ್ಯರ ಶಿಫಾರಸಿನ ಮೇಲೆ ಕುಟೀರವಾಸಿಗಳಾಗಿದ್ದವರು ಸದ್ದಿಲ್ಲದೆ
ಹೊರಟುಹೋದರು:
ಅಡುಗೆಯವನ ವಿನಂತಿಯನ್ನು ಫೆರ್ನಾಂಡೀಸ್ ಮುಖ್ಯಮಂತ್ರಿಗೆ ತಿಳಿಸಿದ.
ಫರ್ನಾಂಡೀಸನ ಮಾತಿಗೆ ಒಪ್ಪಿಗೆ ಮುದ್ರೆ ದೊರೆಯದೆ ಇದ್ದರೆ ಸ್ವತಃ ತಾನೇ
ಮಾತಾಜಿಯವರಿಗೆ ಸಾಷ್ಟಾಂಗಪ್ರಣಾಮ ಮಾಡಬೇಕೆಂದು ಶ್ರೀಪಾದ ಮರೆಯಲ್ಲಿ
ನಿಂತಿದ್ದ :
“ಎಲ್ಲಿ ಆತ ? ಕರೀರಿ.”
ಅವನು ಅಂಗವಸ್ತ್ರ ಹೊದೆದುಕೊಂಡು ಬಂದಿದ್ದ, ವೃತ್ತಿ ಗೌರವಕ್ಕೆ ಚ್ಯುತಿ
ಬರಬಾರದೆಂದು.
ಎದುರು ನಿಂತೊಡನೆ ಸೌದಾಮಿನಿ ಕೇಳಿದಳು :