ಪುಟ:ಯಶೋಧರ ಚರಿತೆ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೬

ಯಶೋಧರ ಚರಿತೆ

ಎಂದೊಡೆ ದಂಢಧರಂಗಿಂ
ತೆಂದರ್ ಗುರುಗಳ್ ವಿಮೋಹಮೃಗಮಂ ಮಿಥ್ಯಾ
ಕಂದರದೊಳ್ ಬೆದರಟ್ಟುವ
ದುಂದುಭಿರವದಂತಿರೊಗೆಯೆ ಗಂಭೀರರವಂ ೨೨


ತಱೆದೊಡೆ ಕಡೆದೊಡೆ ಸೀಳ್ದೊಡೆ
ಪೊರಮಡುವುದೇ ಕಿಚ್ಚು ಕಾಷ್ಠದಿಂ ಪೊಸೆಯಲೊಡಂ
ಪೊರಮಡುವುದಂತೆ ಜೀವಂ
ಪೆರತೊಡಲಿಂ ತೋರುಗುಂ ವಿವೇಕಕ್ರಿಯೆಯಿಂ೨೩


ಕುದಿರೊಳರ್ದೂಗಿದಿದ ಶಂ
ಖದ ದನಿ ನಿಶ್ಛಿದ್ರಮಾದೊಡಂ ಪೊಣ್ಮದೆ ಶಂ
ಖದಿನನ್ಯಮಲ್ಲದೇಂ ಪೊ-
ಣ್ಮಿದ ನಾದಂ ಕಾಯದಿಂದೆ ಜೀವನುಮನ್ಯಂ ೨೪



೨೨. ತಳಾರನಾದ ಚಂಡಕರ್ಮನ ಮಾತನ್ನೆಲ್ಲ ಕೇಳಿದ ಮೇಲೆ ಗುರುಗಳು
ಮಾತಿಗಾರಂಭಿಸಿದರು. ಅವರ ಗಂಭೀರಧ್ವನಿ ಮಿಥ್ಯೆಯೆಂಬ ಕಂದರದಲ್ಲಿದ್ದ
ವಿಮೋಹ(ಅಜ್ಞಾನ) ವೆಂಬ ಮೃಗವನ್ನು ಹೆದರಿಸಿ ಓಡಿಸುವ ದುಂದುಭಿಯ
ಧ್ವನಿಯಂತೆ ಮೊಳಗಿತು. ೨೩. "ಕಟ್ಟಿಗೆಯೊಂದನ್ನು ತೆಗೆದುಕೊಂಡು ಕೊಚ್ಚು;
ಕಡಿ; ಸೀಳು. ಹೇಗೆ ಮಾಡಿದರೂ ಅದರಿಂದ ಬೆಂಕಿ ಹೊರಡುವುದಿಲ್ಲ. ಅದನ್ನು
ತಿಕ್ಕಿದಾಗ ಮಾತ್ರ ಅದರಿಂದ ಅಗ್ನಿ ಉದ್ಭವಿಸುತ್ತದೆ. ಹಾಗೆಯೇ ಜೀವವೇ
ಬೇರೆ. ಅದು ವಿವೇಕ ಕ್ರಿಯೆಯಿಂದ ದೇಹಕ್ಕಿಂತ ಭಿನ್ನವೆಂದು ಕಂಡುಬರುತ್ತದೆ.
೨೪. ಹಗೇವಿನೊಳಗೆ ಇದ್ದುಕೊಂಡು ಶಂಖವನ್ನು ಊದಿದರೆ, ಆ ಶಂಖದ
ಧ್ವನಿ ಹಗೇವಿನಲ್ಲಿ ಯಾವ ಬಿರುಕಿಲ್ಲದಿದ್ದರೂ ಹೊರಗೆ ಹೊಮ್ಮುವುದಿಲ್ಲವೇ?
ಆ ಧ್ವನಿ ಶಂಖದಿಂದ ಬೇರೆಯೇ ಅಲ್ಲವೆ? ಹಾಗೆಯೇ ಆತ್ಮನು ದೇಹಕ್ಕಿಂತ
ಪ್ರತ್ಯೇಕನಾಗಿಯೇ ಇದ್ದಾನೆ.