ಪುಟ:ಯಶೋಧರ ಚರಿತೆ.pdf/೧೩೪

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೨೨
ಯಶೋಧರ ಚರಿತೆ
 

ಪಾರ್ವತಿಯರ ಪ್ರೀತಿಯ ಪ್ರಭಾವದಿಂದ ಎಂದು ತಾತ್ಪರ್ಯ.
೧೨. ಬುಧ ಎಂಬುದಕ್ಕೆ ವಿದ್ವಾಂಸನೆಂದೂ ದೇವನೆಂದೂ ಅರ್ಥವಿದೆ.
ಅಮೃತದ ಕಡಲನ್ನು ಕಡೆದಾಗ ಅದರಿಂದ ಕಲ್ಪವೃಕ್ಷವೇ ಮುಂತಾದ ಸುವಸ್ತುಗಳು
ಮೇಲಕ್ಕೊಗೆದವು. ದೇವತೆಗಳು ಅವುಗಳನ್ನು ಪಡೆದು ನಿರಂತರ ಸುಖವನ್ನು
ಪಡೆಯುತ್ತಾರೆ. ಹಾಗೆಯೇ ಈ ಕಥೆ ಇತಿಹಾಸವೆಂಬ ಕಡಲಲ್ಲಿ ಹುಟ್ಟಿದೆ;
ಕಲ್ಪವೃಕ್ಷದಂತಿದೆ; ರಸವತ್ತಾಗಿದೆ. ಇದರಿಂದ ಬಲ್ಲವರು ಸುಖವನ್ನು ಪಡೆಯುತ್ತಾರೆ.
೧೩. ಚಾಂದ್ರಾಯಣ-ಇದು ಒಂದು ವ್ರತದ ಹೆಸರು. ಚಂದ್ರನ ವೃದ್ಧಿ
ಕ್ಷಯಗಳ ಪ್ರಕಾರ ಆಹಾರಸೇವನೆಯನ್ನು ಹೆಚ್ಚು ಕಡಮೆ ಮಾಡಿಕೊಳ್ಳುವುದು
ಇದರಲ್ಲಿರುವ ಕ್ರಮ.
೧೪. ಅರುಣೋದಯವಾಗುವಾಗ ಹಬ್ಬುವ ಹೊಂಬಣ್ಣದಂತೆ
ಜಿನಾಲಯದ ಮಾಣಿಕ್ಯದ ಕಲಶಗಳು ರಾತ್ರಿಯಲ್ಲೂ ಹೊಂಬಣ್ಣವನ್ನು ಹಬ್ಬಿಸಿ
ರಾತ್ರಿಯನ್ನು ಹಗಲಿಗಿಂತಲೂ ಮಿಗಿಲಾಗಿ ಬೆಳಗಿಸುತ್ತವೆ. ಹಾಗೆಯೇ ಅಲ್ಲಿನ
ಉನ್ನತವಾದ ಧ್ವಜ ಕೇತುಗಳು ಬಹಳ ಮೇಲಕ್ಕೇರಿ(ಕೇತು)ಗ್ರಹದ ಒಡನಾಟವನ್ನು
ಪಡೆದು ಸೂರ್ಯಮಂಡಲವನ್ನು ಅಪಹಾಸ್ಯ ಮಾಡುತ್ತವೆ. ಸೂರ್ಯನನ್ನು
ಕೇತು ನುಂಗುವುದೆಂದು ಕಲ್ಪನೆ. ಅಂತಹ ಕೇತುವಿನೊಡನೆ ಈ ಕೇತುಗಳು
ಮೈತ್ರಿಯನ್ನು ಪಡೆದಿವೆ ಎಂದರೆ ಇಲ್ಲಿನ ಧ್ವಜಗಳು ಬಹಳ ಎತ್ತರದಲ್ಲಿ ಶೋಭಿಸುತ್ತವೆ
ಎಂದು ತಾತ್ಪರ್ಯ.
೧೫. ವಸಂತದ ಚೈತ್ರಮಾಸವು ಬಂದಾಗ ಶುಕ್ಲಪಕ್ಷದಲ್ಲಿ ಚಂದ್ರನು
ಮೂಡಿಕೊಂಡು ಬರುತ್ತಾನೆ; ಅಶೋಕದ ಮರವು ಚಿಗುರಿ ಕೆಂಬಣ್ಣವನ್ನು
ಹಬ್ಬಿಸುತ್ತದೆ ; ಕೋಗಿಲೆಗಳು ಕೂಗತೊಡುಗುತ್ತವೆ. ಪ್ರಕೃತಿಯ ಈ ಸ್ಥಿತಿಯನ್ನೇ
ಕವಿ ಅಲಂಕಾರಿಕವಾಗಿ ಬಣ್ಣಿಸುತ್ತಾನೆ. ದೇವತೆಯ ತೃಪ್ತಿಗಾಗಿ ಪ್ರಾಣಿಗಳನ್ನು
ಬಲಿಕೊಡುವಾಗ ಕೆಲವನ್ನು ತಲೆಗೆ ಗಾಳಹಾಕಿ ತೂಗಾಡಿಸುವುದು, ಕೆಲವನ್ನು
ಬೆಂಕಿಯಲ್ಲಿ ಹಾಕಿ ಸುಡುವುದು(ಇದಕ್ಕಾಗಿ ಬೆಂಕಿಯನ್ನು ಸಿದ್ಧಪಡಿಸುವುದು)
ಗಟ್ಟಿಯಾಗಿ ಆರ್ಭಟಿಸುವುದು ನಡೆಯುತ್ತವೆ. ಇವುಗಳನ್ನು ಅನುಕ್ರಮವಾಗಿ ಇಲ್ಲಿ
ಸೂಚಿಸಲಾಗಿದೆ.

೧೬. ವಸಂತದಲ್ಲಿ ಮುತ್ತುಗಗಳು ಹೂಬಿಡುತ್ತವೆ. ಮಾವಿನ ಮರಗಳೂ
ಹೂ ಬಿಡುತ್ತವೆ. ಮಾವಿನ ಮರಗಳ ಬಳಿಯಲ್ಲೇ ಮುತ್ತುಗದ ಹೂಗಳು
ಉದುರಿಬಿದ್ದುದನ್ನು ಕಾಣುವಾಗ ವಸಂತನು ತನ್ನ ಹಿಂದೆ ಅರಸುತನ ಮಾಡುತ್ತಿದ್ದ
ಶಿಶಿರ (ಚಳಿಗಾಲ) ವನ್ನೆ ಹಿಡಿದು, ಆ ಶಿಶಿರನ ಅಂಗಾಂಗಗಳನ್ನು ಕೊಚ್ಚಿ ಆ