ಪುಟ:ಯಶೋಧರ ಚರಿತೆ.pdf/೧೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಟಿಪ್ಪಣಿಗಳು
೧೨೭
 

ಎದೆಯ ಮೇಲೆ ಸದಾ ಲಕ್ಷ್ಮೀಕಾಂತಿ, (ರಾಜ್ಯಲಕ್ಷ್ಮಿ ಅಥವಾ ಐಶ್ವರ್ಯಲಕ್ಷ್ಮಿ)
ಶೋಭಿಸುವಳೆಂದು ಭಾವ.
ಯಶೋಧರನ ಸ್ತುತಿಪಾಠಕರ ಮನೆಯಂಗಳದಲ್ಲಿಯೂ ಲಕ್ಷ್ಮಿ
ವಿಹರಿಸುತ್ತಾಳೆಂದರೆ ಯಶೋಧರನ ಔದಾರ್ಯದಿಂದ ಸ್ತುತಿಪಾಠಕರೂ
ಐಶ್ವರ್ಯವಂತರಾಗಿದ್ದಾರೆಂದು ತಾತ್ಪರ್ಯ.
೪೨. ಯಶೋಧರನು ಕಾಮನಂತೆ ಸುಂದರ. ಅಬಲಾ ಜನರು ಕಾಮನ
ಉದ್ಯಾನದಲ್ಲಿ ಬೆಳೆಯಿಸಿದ ಕಲ್ಪಲತೆಗಳು. ಯಶೋಧರನ ವಿಲಾಸ ಸಂಧರ್ಭದಲ್ಲಿ
ಸ್ವಭಾವತಃ ಚೆಲುವಿನ ಬಿಂಕದಿಂದ ಬಾಗಿರುವ ಹೆಂಗಸರು ಬಹಳ
ಸಂತೋಷಗೊಳ್ಳುತ್ತಾರೆ. ಕಾಮನಂತೆ ಯಶೋಧರನಿದ್ದರೆ ಸ್ತ್ರೀಯರು ಅವನ
ಪೋಷಣೆಯಲ್ಲಿ ವಿಲಾಸವತಿಯರಾಗಿ ಅವನ ವಿಲಾಸ ಸಂದರ್ಭದಲ್ಲಿ
ಅತ್ಯಾನಂದದಿಂದ ಅವನೊಡನೆ ಕೂಡಿಕೊಳ್ಳುತ್ತಾರೆಂದು ಅಭಿಪ್ರಾಯ.
೪೩. ವೈರಿಗಳನ್ನು ಕೊಂದು ಅವರ ಹೆಂಡಿರು ಬಳೆ ತೊಡದಂತೆ
ಮಾಡುವನೆಂದು ಇಲ್ಲಿ ಹೇಳಲಾಗಿದೆ. ಅವರು ಕಳಚಿದ ಬಳೆಗಳನ್ನು ಕೀರ್ತಿಯೆಂಬ
ತಿಗ್ಗಜದ ಮರಿಯ ದಾಡೆಗೆ ತೊಡಿಸಲಾಗಿದೆ ಎಂದರೆ ಅವನ ಕೀರ್ತಿ ದಿಗಂತದವರೆಗೆ
ಹಬ್ಬಿದೆ. ಆನೆಗಳ ದಾಡೆಗಳಿಗೆ ಬಳೆಗಳನ್ನು ಅಲಂಕಾರಕ್ಕಾಗಿ ತೊಡಿಸುವ ಪದ್ಧತಿ
ಇಂದಿಗೂ ಇದೆ.
೪೪. ರಾಜರನ್ನೆಲ್ಲ ಸೋಲಿಸಿ ಅವರು ಯಶೋಧರನ ಆಜ್ಞೆಯನ್ನು
ಶಿರಸಾವಹಿಸುವಂತೆ ಮಾಡಿದ್ದಾನೆಂದು ತಾತ್ಪರ್ಯ.
೪೫. ನೀರು ಎಂಬುದಕ್ಕೆ ಕಾಂತಿ ಎಂದೂ ಜಲವೆಂದೂ
ಎರಡರ್ಥವಿರುವುದನ್ನು ಇಲ್ಲಿ ಸಮರ್ಪಕವಾಗಿ ಬಳಸಲಾಗಿದೆ. ಯಶೋಧರನ
ದೇಹದ ನೀರು (=ಕಾಂತಿ) ಓಡಿದೆ; ಅದು ನೀರು (=ಜಲ) ಓಡಿದ (=ಒಣಗಿದ)
ಕೊಳದಂತಾಗಿದೆ, ಎಂದು ಇಲ್ಲಿ ಅರ್ಥ.
೪೬. ಗೋಧಾಮೆಯೆಂದರೆ ಏನೆಂದು ಸರಿಯಾಗಿ ಗೊತ್ತಿಲ್ಲ. ನವಿಲಿಗೆ
ಆಗದ ಯಾವುದೋ ಪ್ರಾಣಿ. ಗೋಧಿಯ ಬಣ್ಣದ ಹಾವೇನಾದರೂ ಇರಬಹುದೋ
ಏನೋ !

೪೭. ಹಂಸಗಳು ಮಳೆಯ ಬಿರುಸನ್ನು ತಡೆಯದೆ ಮಾನಸ ಸರೋವರಕ್ಕೆ
ಹೋಗುತ್ತವೆಯಂತೆ. ಹಾಗೆಯೇ ವಿರಹಿಗಳಿಗೆ ಹೂಬಿಟ್ಟ ಬಳ್ಳಿಯನ್ನು ಕಂಡರೆ
ಸಂತಾಪ ಹೆಚ್ಚಾಗುವುದಂತೆ.