ಪುಟ:ಯಶೋಧರ ಚರಿತೆ.pdf/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಯಶೋಧರ ಚರಿತೆ
೧೩
 

ದೌರ್ಬಲ್ಯದ ಅಥವಾ ಅವಿಚಾರಿತ ಕೃತ್ಯದ ದ್ಯೋತಕವಾಗುತ್ತದೆ.
'ಯಶೋಧರ ಚರಿತೆ'ಯಲ್ಲಿ ಬರುವ ಇನ್ನೊಂದು ತೊಡಕು ಹೀಗಿದೆ :
ಯಶೋಧರನೂ ಚಂದ್ರಮತಿಯೂ ಕೋಳಿಗಳಾಗಿ ಆರನೆಯ ಜನ್ಮದಲ್ಲಿದ್ದ
ಕಾಲದಲ್ಲಿಯೇ ಚಂಡಕರ್ಮನು ವ್ರತವನ್ನು ಧರಿಸಿದನು. ಕುಕ್ಕುಟ ಜನ್ಮವನ್ನು
ಕಳೆದು, ಅಭಯರುಚಿ ಅಭಯಮತಿಗಳಾಗಿ ಹುಟ್ಟಿ ಕೆಲವು ವರ್ಷಗಳು ಸಂದ
ಮೇಲೆ ಮಾರಿದತ್ತನು ನಡೆಯಿಸುತ್ತಿದ್ದ ಮಾರಿದೇವತೆಯ ಬಲಿಗಾಗಿ ಆ
ಮನುಷ್ಯಯುಗಲವನ್ನು ಅದೇ ಚಂಡಕರ್ಮನು ತರುತ್ತಾನೆ. ಇದರಿಂದ ಅವನು
ವ್ರತಭಂಗದ ಪಾಪಕ್ಕೂ ಒಳಗಾಗುವುದಿಲ್ಲವೇ? ಅವನಿಗೇನು ಗತಿಯಾಯಿತೆಂದು
ಕೃತಿಯಲ್ಲಿಲ್ಲ.*
ಮಾರಿದತ್ತರಾಜ ತನ್ನ ಸೋದರಳಿಯ-ಸೊಸೆಯರ ಗುರುತೂ ಇಲ್ಲದವನಂತೆ
ಕಾವ್ಯದಲ್ಲಿ ಚಿತ್ರಿತನಾಗಿದ್ದಾನೆ. ಇದು ಸುಸಂಗತವೆನ್ನಿ ಸೀತೆ? ರಾಜ ಕಾರ್ಯದಲ್ಲಿ
ಮಗ್ನನಾಗಿದ್ದ ಕಾರಣ ಅವನಿಗೆ ತನ್ನ ಸೋದರಿಯ ಮಕ್ಕಳ ವಿಷಯವೂ
ಗೊತ್ತಾಗಿರಲಿಲ್ಲ ಎನ್ನಬಹುದೇ? ಅವನಿಗೂ ಯಶೋಮತಿಗೂ
ವಿರಸತೆಯುಂಟಾಗಿ ಹಾಗಾಯಿತೆ ? ಕುಸುಮಾವಳಿಗಾದರೂ ತನ್ನ ಸೋದರ
ಮಾರಿದತ್ತನ ಮೇಲೆ ದ್ವೇಷವಿತ್ತೆ? ಇವೆಲ್ಲ ಪ್ರಶ್ನೆಗಳಿಗೆ ಸರಿಯಾದ
ಸಮಾಧಾನವೇನಿದೆಯೊ ಹೇಳಬರುವುದಿಲ್ಲ.
ಈ ವಿಷಯಗಳಾವುದನ್ನೂ ಲೆಕ್ಕಿಸದೆ ಕಾವ್ಯವನ್ನು ಓದುತ್ತಾ
ಹೋಗುವುದಾದರೆ, ಅದು ನಮ್ಮನ್ನು ಸೆಳೆಯುತ್ತದೆ. ಜನ್ಮಾಂತರದ ಕಥೆಗಳಿದ್ದರೂ
ಯಾವ ತೊಡಕೂ ಇಲ್ಲದೆ ಕಥೆ ಮುಂದೆ ಸಾಗುತ್ತದೆ. ಸಂದರ್ಭೋಚಿತವಾದ
ವರ್ಣನೆ, ಸುಂದರವಾದ ಶೈಲಿ ಆಕರ್ಷಕವಾಗಿವೆ. ಕೃತಿ ಸರಳವಾಗಿ ನಿರರ್ಗಳವಾಗಿ
ಚೇತೋಹಾರಿಯಾಗಿ ಮುಂದುವರಿಯುತ್ತದೆ. ಜನ್ನನಿಗೆ ಇದರಿಂದ ಒಂದು
ಉನ್ನತಸ್ಥಾನ ದೊರೆಯುತ್ತದೆ.


* ಈ ಸಮಸ್ಯೆಗೆ ಸಮಾಧಾನ ಹೇಳಬೇಕಾದರೆ ಮಾರಿದತ್ತನ ಬಳಿಯಿದ್ದ
ಚಂಡಕರ್ಮವೂ ಯಶೋಮತಿಗೆ ಕೋಳಿಗಳನ್ನು ಕಾಣಿಕೆ ಕೊಟ್ಟ ಚಂಡಕರ್ಮನೂ ಬೇರೆ
ಬೇರೆ ವ್ಯಕ್ತಿಗಳೆಂದು ತಿಳಿದುಕೊಳ್ಳಬೇಕು. ತಳಾರಿಕೆಯನ್ನು ವಹಿಸಿದವರಿಗೆಲ್ಲ 'ಚಂಡಕರ್ಮ'
ಎಂಬ ಹೆಸರನ್ನೇ ಪ್ರಯೋಗಿಸುವ ಪದ್ಧತಿ ಇತ್ತೋ ಏನೋ, ನಮ್ಮೂರಲ್ಲಿ 'ಭೂತ'ದ
ಪಾತ್ರಿಯಾಗುವವನಿಗೆ ಪರಂಪರೆಯಿಂದ ಒಂದೇ ಹೆಸರಿರುವುದು ಪದ್ಧತಿ. ಕೃತಿಯಲ್ಲಿ
ಇಬ್ಬರು ಚಂಡಕರ್ಮರಿದ್ದರೆಂದು ಸ್ಫುಟವಾಗಿ ಎಲ್ಲಿಯೂ ಹೇಳಿಲ್ಲವಾದರೂ ಪ್ರಕರಣದಿಂದ
ಹಾಗೆ ತಿಳಿದುಕೊಂಡರೆ ತಪ್ಪಾಗದು.

- ಕೆ. ವೆಂಕಟರಾಮಪ್ಪ