ಪುಟ:ಯಶೋಧರ ಚರಿತೆ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೪

ಯಶೋಧರ ಚರಿತೆ

ನವರತ್ನದ ಪಂಜರದೊಳ್‌
ದಿವಿಜ ಶರಾಸನದ ಮರಿಯನಿರಿಸಿದವೋಲೆ-
ತ್ತುವ ಸೋಗೆಯ ಸುತ್ತಿನೊಳಾ-
ಡುವ ಕೇಕಿಯ ಭಂಗಿ ಲೋಕಮಂ ಸೋಲಿಸುಗಂ೩೭


ಕರಹಟದೊಳ್‌ ಬೇಂಟೆಯ ಕು-
ಕ್ಕುರಿಯಾದಳ್‌ ಸತ್ತು ಚಂದ್ರಮತಿಯುಂ ಬಳಿಕಾ-
ಯೆರಡುಮುಪಾಯನ ಘಟನೆಯಿ-
ನರಮನೆಯಂ ಸಾರ್ದುವಾ ಯಶೋಧರಸುತನಾ೩೮


ತವಗಂಜುವವರ್ಗೆ ತಾವಂ
ಜುವರೆಂಜಲನಾಯ್ದು ತಿಂಬರೆ೦ಜಲ ತಾವ್‌ ಶಿಂ
ಬವನಿಪರಾದಲ್ಲಿಯೆ ನಾಯ್‌
ನವಿಲಪ್ಪನಿತಾಯ್ತು ನೋಡ ಪಾಪದ ಫಲದಿಂ೩೯


ಕಾಣಿಸಿಕೊಂಡಿತು. ೩೭. ಕಾಲಾಂತರದಲ್ಲಿ ಆ ನವಿಲು ಬೆಳೆದು ನವರತ್ನದ
ಪಂಜರದೊಳಗೆ ಇರಿಸಿದ ಕಾಮನ ಬಿಲ್ಲಿನ ಮರಿಯಂತೆ ತನ್ನ ಸೋಗೆಯನ್ನೆತ್ತುತ್ತ
ಸುತ್ತಲೂ ಕುಣಿದಾಡತೊಡಗಿತು. ಅದರ ಚೆಲುವು ಲೋಕವನ್ನೆಲ್ಲ ಸೋಲಿಸಿತು.
೩೮. ಸತ್ತ ಚಂದ್ರಮತಿಯು ಕರಹಟದಲ್ಲಿ ಒಂದು ಬೇಟೆಯ ನಾಯಿಯಾಗಿ
ಹುಟ್ಟಿಕೊಂಡಳು. ಈ ನಾಯಿಯನ್ನೂ ಆ ನವಿಲನ್ನೂ ಅವರವರು ಬೇರೆ
ಬೇರೆಯಾಗಿ ತಂದು ರಾಜನಿಗೆ ಕಾಣಿಕೆಯಾಗಿ ಒಪ್ಪಿಸಿದರು. ಹೀಗೆ ತಾಯಿ
ಮಕ್ಕಳು ಅರಮನೆಯನ್ನೇ ಸೇರಿಕೊಂಡರು. ೩೯. ತಮಗೆ ಅಂಜುತ್ತಿದ್ದವರಿಗೇ
ತಾವು ಅಂಜುವ ಪರಿಸ್ಥಿತಿ ಅವರಿಬ್ಬರಿಗೂ ಈಗ ಬಂದೊದಗಿತು. ತಮ್ಮ ಎಂಜಲನ್ನು
ತಿನ್ನುತ್ತಿದ್ದವರ ಎ೦ಜಲನ್ನು ತಾವು ತಿನ್ನಬೇಕಾಯಿತು. ಎಲ್ಲಿ ಅರಸುತನವನ್ನು
ಮೆರೆದರೊ ಅಲ್ಲಿಯೇ ಅವರಿಬ್ಬರೂ ನಾಯಿ ನವಿಲುಗಳಾಗಿ ಇರಬೇಕಾಯಿತು.