ಪುಟ:ರಂಗಣ್ಣನ ಕನಸಿನ ದಿನಗಳು.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ೧೦

ರಾಜಕೀಯ ಮುಖಂಡರು

ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತವಾಗಿ ಅವರ ಕಷ್ಟ ಸುಖಗಳನ್ನು ವಿಚಾರಿಸಿ ತಕ್ಕ ರೀತಿ ಪರಿಹಾರ ಮಾಡುತ್ತಿದ್ದುದು ; ಗ್ರಾಮಸ್ಥರ ಸಹಕಾರ, ಪಾಠಶಾಲೆಗೆ ಸ್ಲೇಟುಗಳು, ಪುಸ್ತಕಗಳು ಮೊದಲಾದುವು ದಾನವಾಗಿ ಬಂದದ್ದು- ಇವುಗಳೆಲ್ಲ ಸ್ವಲ್ಪ ಉತ್ಪ್ರೇಕ್ಷೆಯಿಂದಲೇ ಪ್ರಚಾರವಾದುವು. ಆ ದಿನದ ಸಭೆಗೆ ಬಂದಿದ್ದ ಉಪಾಧ್ಯಾಯರಿಗೆ ತಮ್ಮ ಗ್ರಾಮಗಳಲ್ಲಿ ಸಹ ಹೀಗೆಯೇ ಸಭೆಗಳನ್ನು ಏರ್ಪಡಿಸಿ ಹೆಸರು ಪಡೆಯಬೇಕೆಂಬ ಆಕಾಂಕ್ಷೆ ಹುಟ್ಟಿಕೊಂಡಿತು. ಅಲ್ಲಲ್ಲಿ ಗ್ರಾಮ ಪಂಚಾಯತಿ ಚೇರ್ಮನ್ನರುಗಳಿಗೆ ಈ ವಿಚಾರದಲ್ಲಿ ಸ್ವಲ್ಪ ಸ್ಪರ್ಧೆ ಸಹ ಏರ್ಪಟ್ಟಿತು.

ಆವಲಹಳ್ಳಿಯ ಸಭೆ ನಡೆದು ಎರಡು ವಾರ ಆಗಿರಬಹುದು. ರಂಗಣ್ಣ ಕಚೇರಿಯಲ್ಲಿ ಕೆಲಸ ಮಾಡುತ್ತ ಕುಳಿತಿದ್ದಾಗ ಬೈರಮಂಗಲದ ಶಾನುಭೋಗರು ಮತ್ತು ಇತರ ಮೂವರು ಕಮಿಟಿ ಮೆಂಬರುಗಳು ಬಂದು ಕಾಣಿಸಿಕೊಂಡರು. ಮುಂದಿನ ತಿಂಗಳಿನಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಬೈರಮಂಗಲದಲ್ಲಿ ಸೇರಿಸಬೇಕೆಂದೂ ಇನ್ ಸ್ಪೆಕ್ಟರ್ ಸಾಹೇಬರು ಖಂಡಿತವಾಗಿ ದಯಮಾಡಿಸಬೇಕೆಂದೂ ಅವರು ಪ್ರಾರ್ಥನೆಯನ್ನು ಸಲ್ಲಿಸಿದರು. ರಂಗಣ್ಣ ಮೊದಲು ಆ ಗುಡಿಸಿಲಿನ ಮಾತೆತ್ತಿ ತನ್ನ ಮಾತನ್ನು ತಪ್ಪದೆ ನಡೆಸಿ ಕೊಟ್ಟುದಕ್ಕಾಗಿ ಅವರಿಗೆಲ್ಲ ಕೃತಜ್ಞತೆಯನ್ನು ತಿಳಿಸಿದನು. ಬಳಿಕ ಶಂಕರಪ್ಪನನ್ನು ಕರೆದು ಅವನ ಕೈಗೆ ಒಂದು ಚೀಟಿಯನ್ನು ಕೊಟ್ಟನು. ಆ ಚೀಟಿಯನ್ನು ನೋಡಿಕೊಂಡು ಶಂಕರಪ್ಪ ಹೊರಕ್ಕೆ ಬಂದನು. ರಂಗಣ್ಣನು ಉಪಾಧ್ಯಾಯರ ಸಂಘದ ವಿಚಾರ