ಪುಟ:ರಂಗಣ್ಣನ ಕನಸಿನ ದಿನಗಳು.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

vii

ಸ್ವಲ್ಪ ಭಾಗವನ್ನು ಪ್ರಕಟಿಸಿದರು. ಇದನ್ನು ನನ್ನ ಮಾನ್ಯ ಸ್ನೇಹಿತರಾದ ಶ್ರೀ. ಸಿ. ಕೆ. ನಾಗರಾಜ ರಾಯರು ನನ್ನ ಗಮನಕ್ಕೆ ತಂದರು ; 'ಕತೆಗಾರ' ಮಾಸಪತ್ರಿಕೆಯ ಸಂಪಾದಕರನ್ನು ಸಹ ಕಂಡು ಮಾತನಾಡಿದರು. ಆದರೆ ಈಗಿನ ಕಾಲದಲ್ಲಿ ಭಾಷಣ ಚೌರ್ಯಗಳೂ ಗ್ರಂಥ ಚೌರ್ಯಗಳೂ ರಾಜಾರೋಷವಾಗಿಯೇ ನಡೆಯುತ್ತಿವೆ. ಲೇಖಕರಾಗಬೇಕೆಂಬ ಹೆಬ್ಬಯಕೆಯುಳ್ಳ ನಮ್ಮ ತರುಣರಿಗೆ ನಾನು ಏನು ಬುದ್ಧಿವಾದವನ್ನು ಹೇಳಬಹುದು? ನಮ್ಮಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ನೀತಿಯ ಮಟ್ಟ ಏರಬೇಕಾಗಿದೆ.

ಈ ಗ್ರಂಥ ರಚನೆಗೆ ನನ್ನ ಸ್ನೇಹಿತರ ಪ್ರೋತ್ಸಾಹವೇ ಮುಖ್ಯವಾದ ಸ್ಫೂರ್ತಿಯನ್ನೊದಗಿಸಿತು. ಹಿಂದೆ ಇದರ ಕೆಲವು ಭಾಗಗಳನ್ನು ನನ್ನ ಸ್ನೇಹಿತರಾದ ಶ್ರೀ. ಎ. ಆರ್. ಕೃಷ್ಣಶಾಸ್ತ್ರಿಗಳಿಗೆ ಹೇಳಿದ್ದೆನು. ಅವರು ಅವುಗಳನ್ನೆಲ್ಲ ಸೇರಿಸಿ ಗ್ರಂಥ ರೂಪಕ್ಕೆ ತಂದರೆ ಚೆನ್ನಾಗಿರುತ್ತದೆಂದು ಪ್ರೋತ್ಸಾಹಿಸಿದರು. 'ದೀಪಾವಳಿಯ ಹಾಸ್ಯದ ಚಟಾಕಿ'ಗಳಲ್ಲಿ ಭಾಷಣವಾದಮೇಲೆ ಇತರ ಸ್ನೇಹಿತರೂ ನನ್ನನ್ನು ಪ್ರೋತ್ಸಾಹಿಸಿದರು. ಅವರುಗಳಲ್ಲಿ ಮುಖ್ಯವಾಗಿ ಆಸ್ಥಾನ ವಿದ್ವಾನ್ ಮೋಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿಗಳ ಪ್ರೋತ್ಸಾಹ ಮತ್ತು ಸಹಾಯಗಳನ್ನು ನಾನು ಒತ್ತಿ ಹೇಳಬೇಕಾಗಿದೆ. ಹಲವು ಸಲಹೆಗಳನ್ನು ಕೊಟ್ಟು, ಅಚ್ಚಿನ ಕರಡುಗಳನ್ನೂ ತಿದ್ದಿ ಅವರು ಬಹಳ ಸಹಾಯ ಮಾಡಿದ್ದಾರೆ; ಪ್ರತಿಯೊಂದು ಫಾರ ಮ್ಮನ್ನೂ ತಿದ್ದಿ ಹಿಂದಕ್ಕೆ ಕೊಟ್ಟಾಗಲೆಲ್ಲ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಅವರಿಗೆ ನನ್ನ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಸಮರ್ಪಿಸುತ್ತೇನೆ. ಸತ್ಯ ಶೋಧನ ಪ್ರಕಟಮಂದಿರದ ಮಾಲೀಕರಾದ ಶ್ರೀ. ನಿಟ್ಟೂರು ಶ್ರೀನಿವಾಸರಾಯರು ಎಂದಿನಂತೆ ನನ್ನಲ್ಲಿ ವಿಶ್ವಾಸವಿಟ್ಟು ಈ ಗ್ರಂಥವನ್ನು ಪ್ರಕಟಿಸಿ ಉಪಕಾರ ಮಾಡಿದ್ದಾರೆ, ಓಂಕಾರ ಪ್ರೆಸ್ಸಿನ ಮಾಲೀಕರಾದ ಶ್ರೀ ಬಿ. ಎಸ್. ನಾರಾಯಣರಾಯರು ಶೀಘ್ರದಲ್ಲಿಯೇ ಅಂದವಾಗಿ ಮುದ್ರಣ ಮಾಡಿ ಕೊಟ್ಟು ಸಹಾಯ ಮಾಡಿದ್ದಾರೆ ಹೀಗೆ ಈ ಗ್ರಂಥರಚನೆಗೂ, ಮುದ್ರಣಕ್ಕೂ, ಪ್ರಕಾಶನಕ್ಕೂ ಸಹಾಯ ಮಾಡಿದ ಎಲ್ಲ ಮಹನೀಯರಿಗೂ ನನ್ನ ವಂದನೆಗಳು,

ಎಂ. ಆರ್. ಶ್ರೀ.