ಪುಟ:ರಂಗಣ್ಣನ ಕನಸಿನ ದಿನಗಳು.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಣ್ಣನ ಕನಸಿನ ದಿನಗಳು


ಪ್ರಕರಣ ೧.

ತಿಮ್ಮರಾಯಪ್ಪನ ಕಥೆ


ರಂಗಣ್ಣ ಎರಡು ತಿಂಗಳ ಕಾಲ ರಜ ತೆಗೆದುಕೊಂಡು ಬೆ೦ಗಳೂರಿಗೆ ಬಂದು ವಾಸಮಾಡುತ್ತಿದ್ದನು, ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾ ಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ ಗಾನವನ್ನು ಹಗಲಿರಳೂ ಕೇಳಿ, ಸಾಲದುದಕ್ಕೆ ಅವುಗಳಿಂದ ಮುತ್ತಿಡಿಸಿಕೊಂಡು ಮನೆಯ ಮಂದಿಯೆಲ್ಲ ಮಲೇರಿಯಾ ಜ್ವರದಲ್ಲಿ ನರಳಿ, ಬದುಕಿದರೆ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಮಾಡಿಸುತ್ತೇನೆಂದು ಹರಕೆ ಮಾಡಿಕೊಂಡು ಬೆಂಗಳೂರಿಗೆ ಸಂಸಾರ ಸಮೇತನಾಗಿ ಬಂದಿದ್ದನ, ಬೆಂಗಳೂರಿಗೆ ಬಂದಮೇಲೆ ಸ್ನೇಹಿತರ ಮನೆಗಳಿಗೆ ಹೋಗುವುದು, ಅವರ ಯೋಗಕ್ಷೇಮಗಳನ್ನು ವಿಚಾರಿಸುವುದು, ತನ್ನ ಮತ್ತು ಮನೆಯವರ ಆನಾರೋಗ್ಯದ ವಿಷಯಗಳನ್ನು ತಿಳಿಸುವುದು, ಅವರು ಹೇಳುವ ಪ್ರೀತಿ ಪೂರ್ವಕವಾದ ಸಮಾಧಾನದ ವಾಕ್ಯಗಳನ್ನು ಕೇಳುವುದು, ಕಡೆಗೆ ಮನೆಗೆ ಹಿಂದಿರುಗಿ ಊಟಮಾಡಿ, ಮಧ್ಯಾಹ್ನ ನಿದ್ರೆ ಮಾಡುವುದು ಅವನ ದಿನಚರಿಯಾಗಿತ್ತು. ಸಾಯಂಕಾಲ ಪೇಟೆಯ ಕಡೆಗೋ ಲಾಲ್ ಬಾಗಿನ ಕಡೆಗೋ ಹೋಗುತ್ತಿದ್ದನು.